ರೈತರ ನೆರವಿಗೆ ನಿಂತ ಪ್ರಸಿದ್ಧ ಗೌಡಗೆರೆ ಶ್ರೀ ಕ್ಷೇತ್ರ
1 min read
ಚನ್ನಪಟ್ಟಣ: ಕಷ್ಟಪಟ್ಟು ಬೆಳೆದ ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗದೇ ನೊಂದು ರಸ್ತೆಗೆ ಸುರಿಯುವ ರೈತರ ನೆರವಿಗೆ ತಾಲೂಕಿನ ಪ್ರಸಿದ್ಧ ಗೌಡಗೆರೆ ಶ್ರೀ ಕ್ಷೇತ್ರ ಮುಂದೆ ಬಂದಿದೆ.
ಹೌದು.., ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರ ಈಗಾಗಲೇ ಸಾಕಷ್ಟು ಪ್ರಸಿದ್ಧಿಯನ್ನು ತನ್ನದಾಗಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ನೆಲೆನಿಂತಿರುವ ಏಷ್ಯಾದಲ್ಲಿಯೇ ಅತಿಎತ್ತರದ ಪಂಚಲೋಹ ವಿಗ್ರಹ ಎಂಬ ಖ್ಯಾತಿ ಇರುವ ಚಾಮುಂಡೇಶ್ವರಿ ವಿಗ್ರಹ ಕಣ್ತುಂಬಿಕೊಳ್ಳಲು ಕೇವಲ ದೇಶವಷ್ಟೇ ಅಲ್ಲದೇ ವಿದೇಶಗಳಿಂದಲೂ ಜನ ಕ್ಷೇತ್ರದತ್ತ ಆಗಮಿಸುತ್ತಿದ್ದಾರೆ. ಕ್ಷೇತ್ರದಲ್ಲಿರುವ ತಾಯಿ ಚಾಮುಂಡೇಶ್ವರಿ ಮಹಿಮೆ ಹಾಗೂ ಜೀವಂತ ಬಸವಪ್ಪನ ಪವಾಡದಿಂದಾಗಿ ಅಪಾರವಾದ ಭಕ್ತಗಣವನ್ನು ಶ್ರೀ ಕ್ಷೇತ್ರ ಹೊಂದಿದೆ. ಇದೀಗ, ಸಾಕಷ್ಟು ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರ ಅನ್ನದಾತನ ಪರ ನಿಲ್ಲುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದೆ.
ಅನ್ನದಾತನ ನೆರವಿಗೆ ಶ್ರೀ ಕ್ಷೇತ್ರ!!
ಹಲವಾರು ಸಂದರ್ಭಗಳಲ್ಲಿ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಹಲವಾರು ರೈತರು ತಮ್ಮ ಬೆಳೆಗಳನ್ನು ರಸ್ತೆ ಹಾಗೂ ನೆಲಕ್ಕೆ ಸುರಿದು ಹೋದ ಸಾಕಷ್ಟು ಪ್ರಕರಣಗಳು ನಡೆದಿವೆ. ತಮ್ಮ ಬೆಳೆ ಕಟಾವಿನ ಕನಿಷ್ಠ ಖರ್ಚು ಸಹ ವಾಪಸು ಬಾರದು ಎಂಬ ಕಾರಣಕ್ಕೆ ರೈತರು ಇಂತಹ ಕೆಲಸ ಮಾಡುವುದು ಸಾಮಾನ್ಯ ಎನ್ನಬಹುದು. ಇಂತಹ ರೈತರ ನೆರವಿಗೆ ನಿಲ್ಲಬೇಕು ಎಂಬ ಕಾರಣಕ್ಕೆ ರೈತರಿಂದ ಬೆಳೆಗಳನ್ನು ಸಹಾಯಧನದ ರೂಪದಲ್ಲಿ ಖರೀದಿಸಲು ಶ್ರೀ ಕ್ಷೇತ್ರ ಮುಂದಾಗಿದೆ. ಈ ಸಂಬಂಧ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಪ್ರಕಟಣೆ ಹೊರಡಿಸಿದ್ದು, “ರೈತರೇ ನೀವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ಆ ಬೆಳೆಯನ್ನು ನಮ್ಮ ಅನ್ನ ದಾಸೋಹ ಭವನಕ್ಕೆ ತಲುಪಿಸಿ, ನಿಮ್ಮ ಬೆಳೆಗೆ ಶ್ರೀ ಕ್ಷೇತ್ರದ ವತಿಯಿಂದ ಸೂಕ್ತ ಸಹಾಯಧನ ನೀಡಲಾಗುವುದು” ಎಂದು ಮನವಿ ಮಾಡಿದ್ದಾರೆ.
ನಿರಂತರವಾಗಿ ನಡೆಯುವ ದಾಸೋಹ!!
ನಿರಂತರವಾಗಿ ಅನ್ನದಾಸೋಹ ನಡೆಯುವುದು ಶ್ರೀ ಕ್ಷೇತ್ರದ ಪ್ರಮುಖ ವಿಶೇಷ ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ಸಾವಿರಾರು ಮಂದಿಗೆ ಕ್ಷೇತ್ರದಲ್ಲಿ ಅನ್ನದಾಸೋಹ ನೀಡಲಾಗುತ್ತದೆ. ರಜಾದಿನಗಳು ಸೇರಿದಂತೆ ವಿಶೇಷವಾದ ದಿನಗಳಲ್ಲಿ ಸಹಸ್ರಾರು ಭಕ್ತರಿಗೆ ಅಚ್ಚುಕಟ್ಟಾದ ದಾಸೋಹ ಮಾಡಲಾಗುತ್ತದೆ. ವಿಶಾಲವಾದ ದಾಸೋಹ ಭವನದ ವ್ಯವಸ್ಥೆ ಹೊಂದಿದ್ದು, ನೂರಾರು ಮಂದಿ ಸಿಬ್ಬಂದಿ ದಾಸೋಹ ಭವನದಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ. ಪ್ರತಿನಿತ್ಯ ದಾಸೋಹಕ್ಕೆ ಸಾಕಷ್ಟು ಸಂಖ್ಯೆಯ ದಿನಸಿ ಹಾಗೂ ತರಕಾರಿ ಬಳಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರಿಂದ ಬೆಳೆಗಳನ್ನು ಸಹಾಯಧನದ ರೂಪದಲ್ಲಿ ಪಡೆದುಕೊಳ್ಳಲು ಶ್ರೀ ಕ್ಷೇತ್ರ ಮುಂದಾಗಿದೆ.
ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ ಎಂಬ ಕಾರಣಕ್ಕೆ ರೈತರು ಬೆಳೆಗಳನ್ನು ರಸ್ತೆಗೆ ಸುರಿಯುವುದನ್ನು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಅನ್ನದಾತರ ನೆರವಿಗೆ ನಿಲ್ಲಬೇಕು ಎಂಬ ಉದ್ದೇಶದಿಂದ ಸಹಾಯಧನದ ರೂಪದಲ್ಲಿ ಬೆಳೆಗಳನ್ನು ಖರೀದಿಸಲು ಮುಂದಾಗಿದ್ದೇವೆ. ನಮ್ಮ ಚನ್ನಪಟ್ಟಣ, ರಾಮನಗರ, ಮಾಗಡಿ, ಕುಣಿಗಲ್, ಮದ್ದೂರು ಸೇರಿದಂತೆ ಅಕ್ಕಪಕ್ಕದ ರೈತರು ಬೆಳೆಗಳನ್ನು ಸುರಿಯುವ ಬದಲು, ದಾಸೋಹ ಬಳಕೆಗೆ ನೀಡಬಹುದು. ಅದಕ್ಕೆ ಸಹಾಯಧನವನ್ನು ಸಹ ಭರಿಸುತ್ತೇವೆ.
– ಡಾ.ಮಲ್ಲೇಶ್ ಗುರೂಜೀ, ಧರ್ಮದರ್ಶಿ, ಶ್ರೀ ಗೌಡಗೆರೆ ಕ್ಷೇತ್ರ.