ಜು.1ರಿಂದ ಹೊಸ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಹಿನ್ನೆಲೆ ಗ್ರಾಹಕರ ಸಭೆ

1 min read

ಮೈಸೂರು, ಜೂನ್‌ 28, 2025: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಜುಲೈ 1ರಿಂದ ಸ್ಮಾರ್ಟ್‌ ಮೀಟರ್‌ ಅಳವಡಿಸುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಕುರಿತು ಅರಿವು ಮೂಡಿಸಲು ಸಭೆ ನಡೆಸಲಾಯಿತು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ನಿಗಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸೆಸ್ಕ್‌ ಐಟಿ ಅಂಡ್‌ ಎಂಐಎಸ್‌ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ರಾಮಸ್ವಾಮಿ ಅವರು, “ಕೇಂದ್ರ ವಿದ್ಯುತ್ ಪ್ರಾಧಿಕಾರ(ಸಿಇಎ) ಮತ್ತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ದ ಸೂಚನೆಯಂತೆ ಜುಲೈ 1ರಿಂದ ಸ್ಮಾರ್ಟ್‌ ಮೀಟರ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಸ್ಮಾರ್ಟ್‌ ಮೀಟರ್‌ ಅಳವಡಿಕೆಯಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲವಿದ್ದು, ನಿಖರವಾದ ಬಿಲ್ಲಿಂಗ್‌, ಅನಗತ್ಯ ವಿದ್ಯುತ್‌ ಬಳಕೆ ತಡೆಯುವುದು, ಸುಲಭವಾಗಿ ರೀಚಾರ್ಜ್‌ ಮಾಡಿಕೊಳ್ಳುವುದು, ತ್ವರಿತವಾಗಿ ದೋಷಗಳನ್ನು ಪತ್ತೆಹಚ್ಚುವುದು, ವಿದ್ಯುತ್‌ ಬಳಕೆಯನ್ನು ಟ್ರ್ಯಾಕ್ ಮಾಡಲು ಮತ್ತು ನಿರ್ವಹಿಸುವುದರೊಂದಿಗೆ ವಿದ್ಯುತ್‌ ಬಳಕೆಯ ಪಾರದರ್ಶಕತೆಯನ್ನು ಒದಗಿಸುತ್ತದೆ” ಎಂದು ಮಾಹಿತಿ ನೀಡಿದರು.

ಸಾಧಕ-ಬಾಧಕಗಳ ಪರಿಶೀಲಿಸಿ:
ಈ ಸಂದರ್ಭದಲ್ಲಿ ಮಾತನಾಡಿದ ಕೆಲವು ಗ್ರಾಹಕರು, “ಸ್ಮಾರ್ಟ್‌ ಮೀಟರ್‌ ಬಗ್ಗೆ ಗ್ರಾಹಕರಿಗೆ ಅರಿವಿಲ್ಲ. ಆದ್ದರಿಂದ ಪ್ರಾಯೋಗಿಕವಾಗಿ ಸರ್ಕಾರಿ ಕಚೇರಿಗಳು, ಕೈಗಾರಿಕೆಗಳಲ್ಲಿ ಮೊದಲಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಸಿ, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸುವುದರ ಜೊತೆಗೆ ಸ್ಮಾರ್ಟ್‌ ಮೀಟರ್‌ ನಿರ್ವಹಣೆ, ರೀಚಾರ್ಜ್‌ ಮಾಡುವ ಕ್ರಮ, ಸಮಸ್ಯೆ ಉಂಟಾದಲ್ಲಿ ಗ್ರಾಹಕರು ಏನು ಮಾಡಬೇಕು? ಎಂಬ ಬಗ್ಗೆ ಅರಿವು ಮೂಡಿಸಿ, ಆ ನಂತರದಲ್ಲಿ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸುವಂತೆ” ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಸದಸ್ಯರು, “ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲು ಇನ್ನೂ ಸ್ವಲ್ಪ ಕಾಲಾವಕಾಶ ನೀಡಬೇಕು,” ಎಂದು ಕೋರಿದರಲ್ಲದೆ, ಈ ಕುರಿತು ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕರಾದ ಡಿ.ಜೆ. ದಿವಾಕರ್‌ ಅವರಿಗೆ ಮನವಿ ಸಲ್ಲಿಸಿದರು.

15 ದಿನಗಳು ಮುಂದೂಡಿಕೆ
ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿ, ಸೆಸ್ಕ್ ವತಿಯಿಂದ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು 15 ದಿನಗಳ ಕಾಲ ಮುಂದೂಡಲು ಕ್ರಮಕೈಗೊಳ್ಳಲಾಗಿದೆ.

ಸಭೆಯಲ್ಲಿ ಸೆಸ್ಕ್‌ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶರಣಮ್ಮ ಎಸ್‌. ಜಂಗಿನ, ಮುಖ್ಯ ಇಂಜಿನಿಯರ್‌ ಮೃತ್ಯುಂಜಯ, ಐಟಿ ಅಂಡ್‌ ಎಂಐಎಸ್‌ ವಿಭಾಗದ ಡಿಜಿಎಂ ರಮೇಶ್‌, ಎಜಿಎಂ ಭರತ್‌ ಸೇರಿದಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *