ನೇಣು ಬಿಗಿದ ಸ್ಥಿತಿಯಲ್ಲಿ ರೈತ ಮುಖಂಡ ಕೃಷ್ಣೇಗೌಡ ಶವ ಪತ್ತೆ: ಕೊಲೆ ಶಂಕೆ
1 min read
ಮಂಡ್ಯ,ಫೆ.17-ರೈತ ಮುಖಂಡರೊಬ್ಬರ ಮೃತ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಐಚನಹಳ್ಳಿ ಗ್ರಾಮದ ರೈತ ಮುಖಂಡ ಕೃಷ್ಣೇಗೌಡ(45) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಐಚನಹಳ್ಳಿ ಗ್ರಾಮದ ನಂಜೇಗೌಡ ಅವರ ಮಗನಾದ ಜನಪರ ಹೋರಾಟಗಾರ ಹಾಗೂ ಎಳನೀರು ವ್ಯಾಪಾರಿಯಾದ ಕೃಷ್ಣೇಗೌಡ ಅವರ ಮೃತದೇಹ ಜಮೀನಿನ ಬಳಿ ಮರದ ಕೊಂಬೆಗೆ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಕುರಿತು ರೈತ ಮುಖಂಡ ಬೂಕನಕೆರೆ ನಾಗರಾಜು ಮಾತನಾಡಿ, ಯಾರೋ ದುಷ್ಕರ್ಮಿಗಳು ಕೃಷ್ಣೇಗೌಡ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸೀಬೆಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವಂತೆ ಬಿಂಬಿಸಲಾಗಿದೆ. ಈ ಘಟನೆಯ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯನ್ನು ಕೊಡಿಸಬೇಕು ಆಗ್ರಹಿಸಿದರು.
ರೈತ ಮುಖಂಡ ಕೃಷ್ಣೇಗೌಡ ಅವರ ಅಕಾಲಿಕ ನಿಧನಕ್ಕೆ ರೈತ ಮುಖಂಡ ಮುದುಗೆರೆ ರಾಜೇಗೌಡ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕೆ.ಆರ್.ಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ಕೃಷ್ಣೇಗೌಡರ ಪತ್ನಿ ಲತಾ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೋಲಿಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕೃಷ್ಣೇಗೌಡರ ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.