ಟಿ20 ವಿಶ್ವಕಪ್ ಟೂರ್ನಿ: ಚಾಂಪಿಯನ್ ತಂಡಕ್ಕೆ 1.6 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಐಸಿಸಿ
1 min read
ನವದೆಹಲಿ,ಅ.10- ಇದೇ ತಿಂಗಳು ಅ.17 ರಿಂದ ಒಮನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡ 1.6 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಪಡೆದುಕೊಳ್ಳಲಿದೆ.
ಬಹುಮಾನ ಮೊತ್ತದ ವಿವರಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದು ಪ್ರಕಟಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಸಿಸಿ, ಪಂದ್ಯಾವಳಿಯಲ್ಲಿ ವಿಜೇತರಾದವರು 1.6 ಮಿಲಿಯನ್ ಯುಎಸ್ ಡಾಲರ್ ಚೆಕ್ ಅನ್ನು ಸ್ವೀಕರಿಸಲಿದ್ದಾರೆ ಹಾಗೂ ರನ್ನರ್ಸ್ ಅಪ್ ಇದರ ಅರ್ಧದಷ್ಟು ಮೊತ್ತವನ್ನು ಪಡೆಯುತ್ತಾರೆ ಎಂದು ಬಹಿರಂಗಪಡಿಸಿದೆ.
ನವೆಂಬರ್ 10 ಹಾಗೂ 11 ರಂದು ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುವ ತಂಡಗಳು ತಲಾ 400,000 ಯುಎಸ್ ಡಾಲರ್ ಪಡೆಯುತ್ತವೆ. 2016 ರಂತೆ ಸೂಪರ್ 12 ಹಂತದಲ್ಲಿ ತಂಡಗಳು ಗೆಲ್ಲುವ ಪ್ರತಿಯೊಂದು ಪಂದ್ಯಕ್ಕೂ ಬೋನಸ್ ಮೊತ್ತ ಇರುತ್ತದೆ. ಆ ಹಂತದಲ್ಲಿ 30 ಪಂದ್ಯಗಳನ್ನು ಗೆಲ್ಲುವ ತಂಡವು ಈ ಬಾರಿ 40,000 ಯುಎಸ್ ಡಾಲರ್ ಗೆಲ್ಲುತ್ತದೆ ಎಂದು ಐಸಿಸಿ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ.
ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ಪುರುಷರ ಟಿ -20 ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಲಿವೆ.
ಎಂಟು ತಂಡಗಳಾದ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಸೂಪರ್ 12 ಹಂತದಿಂದ ತಮ್ಮ ಅಭಿಯಾನವನ್ನು ಆರಂಭಿಸುತ್ತವೆ.