ಜಿಮ್‌ ನಿಂದ ಹೃದಯಾಘಾತ ಸಂಭವಿಸುತ್ತದೆಯೇ? ಇಲ್ಲ, ಹಾಗಾದರೆ ಹೃದಯಾಘಾತಕ್ಕೆ ಕಾರಣವೇನು?

1 min read

ಆರೋಗ್ಯವಾಗಿರುವುದಕ್ಕೆ ಫಿಟ್‌ ನೆಸ್‌ ಮುಖ್ಯ. ಫಿಟ್‌ ಆಗಿರಲು ವ್ಯಾಯಾಮ, ದೈಹಿಕ ಕಸರತ್ತು, ಯೋಗ ಬಹಳ ಮುಖ್ಯ. ಇವೆಲ್ಲವು ಮನುಷ್ಯ ಆರೋಗ್ಯವಂತನಾಗಿರಲು ಬಹಳ ಸಹಕಾರಿ.

ದೇಹ ದಂಡನೆ ಮಾಡುವುದರಿಂದ ತೂಕವನ್ನು ನಿಯಂತ್ರಿಸಬಹುದು, ಹೃದಯ ಕಾಯಿಲೆಗಳ ಅಪಾಯ ತಪ್ಪಿಸಿ ಫಿಟ್ ಆಗಿರಬಹುದು ಎಂಬುದು ಎಲ್ಲರ ನಂಬಿಕೆ.

ಹೌದು, ಫಿಟ್‌ ನೆಸ್‌ ಗೆ ಇನ್ನೊಂದು ಹೆಸರೇ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್.‌ ಅವರು ಫಿಟ್‌ ನೆಸ್‌ ಗೆ ಕೊಡುತ್ತಿದ್ದ ಪ್ರಾಮುಖ್ಯತೆ, ಅದಕ್ಕಾಗಿ ಅವರು ದೈಹಿಕ ಕಸರತ್ತು ಎಲ್ಲರನ್ನು ಅಚ್ಚರಿಗೊಳಿಸುತ್ತಿತ್ತು.

ಅಪ್ಪು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದ ಹಲವು ಮಂದಿ ಅವರಂತೆ ಫಿಟ್ ಆಗಬೇಕೆಂದು ದೇಹ ದಂಡನೆ, ವ್ಯಾಯಾಮದಲ್ಲಿ ತೊಡಗಿದ್ದರು. ಆದರೆ ಇದೀಗ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಫಿಟ್ ನೆಸ್ ಗಾಗಿ ಮಾಡುವ ದೇಹ ದಂಡನೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಅಲ್ಲದೆ, ಜಿಮ್‌ ಮಾಡುವುದರಿಂದ ಹೃದಯಾಘಾತ ಸಂಭವಿಸುತ್ತದೆಯೇ ? ಎಂದು ಪ್ರಶ್ನೆ, ಅನುಮಾನ ಕಾಡುತ್ತಿದೆ. ಜೊತೆಗೆ ಅಪ್ಪು ಸಾವಿನ ಬಳಿಕ ಜಿಮ್‌ ಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ.

ದಿನನಿತ್ಯದ ಜೀವನದಲ್ಲಿ ದೇಹಕ್ಕೆ ಆಹಾರ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ದೇಹ ದಂಡನೆ ಕೂಡ. ಆದರೆ ಎಷ್ಟು ಮಾಡಬೇಕು? ಹೇಗೆ ಮಾಡಬೇಕು? ಯಾವ ಆಹಾರವನ್ನು ಸೇವಿಸಬೇಕು? ಎಂಬುದರ ಅರಿವಿರಬೇಕು.

ಮುಖ್ಯವಾಗಿ ಹೃದಯಕ್ಕೆ ವ್ಯಾಯಾಮದ ಅಗತ್ಯತೆ ಹೆಚ್ಚಾಗಿದೆ. ದೇಹದಂಡನೆ ಮಾಡುವಾಗ ಸಹಜವಾಗಿಯೇ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಹಾಗೆಯೇ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹೃದಯಾಘಾತಕ್ಕೆ ಕಾರಣವಾಗುವ ವ್ಯಾಯಾಮಗಳು:

ಅತಿಯಾದ ಪರಿಶ್ರಮದ ದೇಹದಂಡನೆಯಿಂದ ಹೃದಯದ ಸಮಸ್ಯೆಯಾಗುವ ಸಾಧ್ಯತೆಗಳಿವೆ ಎಂದು ಕೆಲವು ಅಧ್ಯಯನದಿಂದ ತಿಳಿದು ಬಂದಿದೆ. ತೀವ್ರತರವಾದ ವ್ಯಾಯಾಮವು ಹೃದಯದ ಮೇಲೆ ಪರಿಣಾಮ ಬೀರಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಯೂ.ಎಸ್.ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದೇಹದ ಅಗತ್ಯಕ್ಕೆ ಮೀರಿ ತೀವ್ರವಾದ ದೇಹದಂಡನೆ ಮಾಡಿದಾಗ ಹಠಾತ್ ಹೃದಯ ಸ್ತಂಭನ ಅಥವಾ ಹಠಾತ್ ಹೃದಯ ಸಾವುಗಳಂತಹ ಅಪಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬೇಕಾಬಿಟ್ಟಿಯಾಗಿ ನಿಮ್ಮ ದೈಹಿಕ ಶಕ್ತಿಗೆ ನೀವೇ ಸವಾಲು ಎಸೆಯಬೇಡಿ. ಇದರಿಂದ ಹಠಾತ್ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬಹುದು.

ಹೃದಯದ ಆರೋಗ್ಯಕ್ಕೆ ಸಹಕಾರಿ ಯಾವುದು?:

ಪ್ರತಿದಿನ ಸುಮಾರು ೧೫೦ ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಉತ್ತಮ ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹೃದಯದ ಸ್ನಾಯುಗಳನ್ನು ಬಲಪಡಿಸಲು ಮತ್ತು ಹೃದಯದ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ.

ವ್ಯಾಯಾಮವು ಮುಖ್ಯವಾಗಿ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುವುದರಿಂದ ಹಿಡಿದು ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ.

ವ್ಯಾಯಾಮದ ಪ್ರಯೋಜನಗಳು:

ವ್ಯಾಯಾಮದಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ಯೋಗ, ವ್ಯಾಯಾಮ, ವರ್ಕೌಟ್ ಮಾಡುವುದರಿಂದ ದೇಹದ ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆದರೆ ಕೆಲವು ಅಧ್ಯಯನದ ಪ್ರಕಾರ ಕಠಿಣವಾದ ವರ್ಕೌಟ್ ಮಾಡುವುದರಿಂದ, ಬೇಗ ಸಣ್ಣಗಾಗಬೇಕು ಎಂಬ ಬಯಕೆಯಿಂದ, ಹಲವಾರು ಪ್ರೋಟೀನ್ ಗಳ, ಇಂಜೆಂಕ್ಷನ್ ಗಳ ಬಳಕೆಯಿಂದ ದೇಹಕ್ಕೆ ತೊಡುಕುಗಳು ಉಂಟಾಗುತ್ತದೆ.

ನಿಜವಾಗಲೂ ವ್ಯಾಯಾಮದಿಂದ ಯಾವುದೇ ರೀತಿಯ ಆರೋಗ್ಯ ತೊಂದರೆಗಳು ಉಂಟಾಗುವುದಿಲ್ಲ. ಬದಲಾಗಿ ನಮ್ಮ ದೇಹ ಏನನ್ನು ಮಾಡಲು ಸಿದ್ಧವಾಗಿದೆ? ಯಾವ ಆಹಾರ ಸ್ವೀಕರಿಸಿದರೆ ದೇಹಕ್ಕೆ ಉತ್ತಮ ಎಂಬ ಕನಿಷ್ಟ ತಿಳುವಳಿಕೆ ನಮ್ಮಲ್ಲಿ ಇರಬೇಕು.

ತ್ವರಿತವಾಗಿ ಸಣ್ಣಗಾಗಿ ನಾಜೂಕಾದ ದೇಹ ಹೊಂದಬೇಕು ಎಂದಾಗಲೀ, ತಕ್ಷಣವೇ ಸಿಕ್ಸ್ ಪ್ಯಾಕ್ ಬಂದು ಬಿಡಬೇಕು ಎಂದಾಗಲೀ ದೇಹ ದಂಡನೆ ಮಾಡಬಾರದು. ಸಮತೋಲಿತ ಆಹಾರವನ್ನು ಸೇವಿಸಿ. ದೇಹದ ಮೇಲಿನ ಅತಿಯಾದ ಬಯಕೆ ಬಿಟ್ಟುಬಿಡಿ. ದೇಹದ ಆರೋಗ್ಯದ ಮೇಲೆ ಕಾಳಜಿ ವಹಿಸಿ. ಪ್ರತಿದಿನವು ೩೦ ನಿಮಿಷಗಳ ಕಾಲ ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸಿ. ತಜ್ಞರ ಸಲಹೆ ಪಡೆದು ವ್ಯಾಯಾಮ, ದೇಹದಂಡನೆ ಮಾಡಿ. ಅಗತ್ಯಕ್ಕೆ ತಕ್ಕಂತೆ ದೇಹದಂಡನೆ ಮಾಡಿ. ದೇಹದಲ್ಲಿ ಯಾವುದೇ ತೊಡಕು ಸಂಭವಿಸಿದರೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ.

About Author

Leave a Reply

Your email address will not be published. Required fields are marked *