‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್ ರಿಲೀಸ್: ಯೋಧನಾಗಿ ಕಾಣಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
1 min read
ಬೆಂಗಳೂರು,ಜ.26-ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಅವರ ಅಭಿಮಾನಿಗಳಿಗೆ ಗಣರಾಜ್ಯೋತ್ಸವದ ಗಿಫ್ಟ್ ಸಿಕ್ಕಿದೆ. ಅದೆನೆಂದರೆ ಅಪ್ಪು ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಜೇಮ್ಸ್’ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ. ವಿಶೇಷವೆಂದರೆ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಇದೇ ಮೊದಲ ಬಾರಿಗೆ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪೋಸ್ಟರ್ನಲ್ಲಿ ‘ಸಲಾಂ ಸೋಲ್ಜರ್.. ದೇಶಕ್ಕೆ ನೀನೆ ಪವರ್’ ಎಂದು ಬರೆಯಲಾಗಿದೆ. ಆ ಮೂಲಕ ದೇಶ ಕಾಯುವ ಸೈನಿಕರಿಗೆ ‘ಜೇಮ್ಸ್’ ಚಿತ್ರತಂಡ ಸಲಾಂ ಎಂದಿದೆ. ಹಾಗೇ, ದೇಶದ ಎಲ್ಲಾ ಪ್ರಜೆಗಳಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದೆ.
ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರನ್ನು ಯೋಧನ ಲುಕ್ ನಲ್ಲಿ ನೋಡಿದ ಅಭಿಮಾನಿಗಳು ಸಖತ್ ಕ್ರೇಜ್ ಆಗಿದ್ದು, ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಈ ವಿಚಾರ ಇದೀಗ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ನಲ್ಲಿ ಸ್ಪಷ್ಟವಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ‘ಜೇಮ್ಸ್’ ತೆರೆಗೆ ಬರಲಿದೆ.
ಇನ್ನು ವಿಶೇಷವೆಂದರೆ ಸಿನಿಮಾದಲ್ಲಿ ರಾಜ್ ಕುಟುಂಬದ ಮೂವರು ಸಹೋದರರು ಅಭಿನಯಿಸಿದ್ದಾರೆ. ಆ ಮೂಲಕ ತಮ್ಮ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬ ದಿ.ಪಾರ್ವತಮ್ಮ ರಾಜ್ಕುಮಾರ್ ಅವರ ಕನಸು ಜೇಮ್ಸ್ ಸಿನಿಮಾದ ಮೂಲಕ ನನಸಾಗಿದೆ. ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕಡೆಯ ಸಿನಿಮಾ ‘ಜೇಮ್ಸ್’. ಚೇತನ್ ಕುಮಾರ್ ನಿರ್ದೇಶನದಲ್ಲಿ ಮಾಡಿರುವ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿ ಇರುವಾಗಲೇ ಪುನೀತ್ ರಾಜ್ಕುಮಾರ್ ಹಠಾತ್ ನಿಧನ ಹೊಂದಿದರು. ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದೇ ‘ಜೇಮ್ಸ್’ ಚಿತ್ರವನ್ನು ತೆರೆಗೆ ತರಲು ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.
ಇನ್ನು ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಿಯಾ ಆನಂದ್ ಜೋಡಿಯಾಗಿ ಅಭಿನಯಿಸಿದ್ದಾರೆ.
ಉಳಿದಂತೆ ರಂಗಾಯಣ ರಘು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ನಯನಾ, ಹಂಸಾ ಪ್ರತಾಪ್, ಕಾವ್ಯಾ ಶಾಸ್ತ್ರೀ, ಸಮೀಕ್ಷಾ, ಹರ್ಷ, ಶೈನ್ ಶೆಟ್ಟಿ, ಶ್ರೀಕಾಂತ್, ಅನು ಪ್ರಭಾಕರ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ.