ಚಾಮುಂಡಿ ಬೆಟ್ಟ ಆಯ್ತು ಇದೀಗಾ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲು ಭೂಕುಸಿತ!
1 min readಮೈಸೂರಿನ ಚಾಮುಂಡಿ ಬೆಟ್ಟ ಆಯ್ತು ಈಗ ಮಲೆ ಮಹದೇಶ್ವರ ಬೆಟ್ಟದ ಸರದಿ. ಚಾಮುಂಡಿ ಬೆಟ್ಟದಂತೆ ಮಾದೇಶ್ವರ ಸ್ವಾಮಿ ಬೆಟ್ಟದಲ್ಲು ಕೂಡ ಭೂಕುಸಿತವಾಗಿದೆ. ಶನಿವಾರ ರಾತ್ರಿ ಸುರಿದ ಬಾರೀ ಮಳೆಯಿಂದ ಮಹದೇಶ್ವರ ಬೆಟ್ಟದಲ್ಲಿ ಭೂ ಕುಸಿತವಾಗಿ ಬಾರೀ ಗಾತ್ರದ ಎರಡು ಬಂಡೆಗಳು ರಸ್ತೆ ಮಧ್ಯೆ ಉರುಳಿ ಬಿದ್ದಿದೆ.
ಮಹದೇಶ್ವರ ಬೆಟ್ಟದ ವಡ್ಗಲ್ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪ ಭೂ ಕುಸಿತವಾಗಿ ಬಾರೀ ಗಾತ್ರದ ಎರಡು ಬಂಡೆಗಳು ಉರುಳಿ ರಸ್ತೆ ಮಧ್ಯೆ ನಿಂತಿದೆ. ಆದರೆ ಬಂಡೆ ಉರುಳುವ ವೇಳೆ ಯಾವುದೇ ವಾಹಗಳ ಸಂಚಾರ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ.
ರಸ್ತೆ ಮಧ್ಯೆ ಬಂಡೆ ಬಿದ್ದಿರುವ ಕಾರಣ ವಾಹನ ಸಂಚಾರಕ್ಕೆ ಅಡಚಡಣೆ ಉಂಟಾಗಿದೆ. ಒಂದು ವೇಳೆ ಬಂಡೆ ಪಕ್ಕದಲ್ಲಿ ವಾಹನ ಹಾದು ಹೋಗುವಾಗ ಏನಾದರೂ ಅನಾಹುತ ಸಂಭವಿಸಿದರೆ ಏನು ಮಾಡುವುದು ಎಂಬ ಪ್ರಶ್ನೆ ಪ್ರಯಾಣಿಕರನ್ನು ಕಾಡಿದೆ.
ಮಹದೇಶ್ವರ ಬೆಟ್ಟದಲ್ಲಿ ಬಂಡೆ ಕುಸಿತವಾಗುತ್ತಿರುವುದು ಇದೇ ಮೊದಲಲ್ಲ. ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಪಾಲಾರ್ ಗೆ ಹೋಗುವ ರಸ್ತೆಯಲ್ಲಿ ಕೂಡ ಇದೇ ರೀತಿ ಭೂ ಕುಸಿತವಾಗಿ ಭತ್ತ ಕಟಾವು ಮಾಡುವ ಯಂತ್ರ ಪಲ್ಟಿ ಹೊಡೆದಿತ್ತು. ಆದರೆ ಯಾವುದೇ ಜೀವ ಹಾನಿಯಾಗಿರಲಿಲ್ಲ.
ಈ ಕಾರಣದಿಂದ ಮಹದೇಶ್ವರ ಬೆಟ್ಟದ ರಸ್ತೆಗಳಲ್ಲಿ ಕಾರು, ಬಸ್ಸು, ಬೈಕು ಸೇರಿದಂತೆ ಇತರೆ ವಾಹನಗಳಲ್ಲಿ ಹೋಗಲು ಪ್ರಯಾಣಿಕರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಹೋಗುವಾಗ ಭೂ ಕುಸಿತವಾದರೆ ಏನು ಮಾಡುವುದು ಎಂದು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಸ್ಥಿತಿ ಉಂಟಾಗಿದೆ.