4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಸಮಂತಾ-ನಾಗಚೈತನ್ಯ

1 min read

ಹೈದರಾಬಾದ್,ಅ.2-ಟಾಲಿವುಡ್ ನ ಕ್ಯೂಟ್ ಜೋಡಿ ಎಂದೇ ಜನಪ್ರಿಯರಾಗಿದ್ದ ನಾಗಚೈತನ್ಯ ಮತ್ತು ಸಮಂತಾ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಇವರಿಬ್ಬರು ಬೇರೆಯಾಗುತ್ತಿರುವುದನ್ನು ಅಧಿಕೃತಗೊಳಿಸಿದ್ದಾರೆ.
ಇತ್ತೀಚೆಗೆ ಇವರಿಬ್ಬರು ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಚಾರ ಭಾರೀ ಚರ್ಚೆಯಲ್ಲಿತ್ತು. ಇದೀಗ ಈ ವಿಚಾರವನ್ನು ಸ್ವತಃ ಇವರಿಬ್ಬರೇ ತಿಳಿಸಿದ್ದಾರೆ. ಇಂದು ಸೋಷಿಯಲ್ ಮೀಡಿಯಾ ಮೂಲಕ ತಾವು ದೂರವಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ.


ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ‘ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಪರಸ್ಪರ ದೂರವಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ’ ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ.
ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್ ಆನ್ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.


ಟಾಲಿವುಡ್ ನ ಜನಪ್ರಿಯ ತಾರೆಯರಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಹಲವು ವರ್ಷಗಳ ಕಾಲ ಪ್ರೀತಿಸಿ 2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು.
ಕೆಲ ತಿಂಗಳ ಹಿಂದೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿನ ಹೆಸರಿನಿಂದ ಅಕ್ಕಿನೇನಿ ಸರ್ ನೇಮ್ ನ್ನು ಸಮಂತಾ ತೆಗೆದುಹಾಕಿದ ನಂತರ ಅವರಿಬ್ಬರ ದಾಂಪತ್ಯ ಜೀವನ ಬಗ್ಗೆ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಎಲ್ಲಿ ಹೋದರೂ ಈ ಜೋಡಿಯ ವಿಚ್ಛೇದನದ ಬಗ್ಗೆಯೇ ಕೇಳಿಬರುತ್ತಿದ್ದವು. ಇಬ್ಬರೂ ಬೇರೆಯಾಗುತ್ತಿದ್ದಾರಂತೆ, ಸಂಸಾರದಲ್ಲಿ ಹೊಂದಾಣಿಕೆ ಇಲ್ಲವಂತೆ, ಸಮಂತಾ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರಂತೆ ಎಂಬೆಲ್ಲ ಅಂತೆಕಂತೆಗಳು ದಿನಕ್ಕೊಂದರಂತೆ ಬರುತ್ತಿತ್ತು.
ಇತ್ತೀಚೆಗೆ ಕೆಲವು ತಿಂಗಳಿನಿಂದ ಸಮಂತಾ-ನಾಗಚೈತನ್ಯ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಪಾರ್ಟಿಗಳಲ್ಲಿ, ನಾಗಚೈತನ್ಯ ಅವರ ಸಿನೆಮಾ ‘ಲವ್ ಸ್ಟೋರಿ’ ಬಿಡುಗಡೆ ಸಮಾರಂಭದಲ್ಲಿ, ಸಕ್ಸಸ್ ಪಾರ್ಟಿಯಲ್ಲಿ ಸಹ ಸಮಂತಾ ಗೈರಾಗಿದ್ದರು, ಆಗ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿತ್ತು.
ಆದರೆ ಇವರಿಬ್ಬರೂ ಎಲ್ಲಿಯೂ ಇದುವರೆಗೆ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿರಲಿಲ್ಲ. ಇಬ್ಬರೂ ಬೇರೆಯಾಗದಿರಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದರು, ಆದರೆ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡುವ ಸುದ್ದಿಯನ್ನು ಇಂದು ಇನ್ ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *