ಕೊಲೆ ಯತ್ನ: ಮೂವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ಹುಣಸೂರು ನ್ಯಾಯಾಲಯ
1 min read
ಹುಣಸೂರು,ಅ.22-ಕೊಲೆ ಮಾಡಲು ಯತ್ನಿಸಿದ್ದ ಮೂವರು ಅಪರಾಧಿಗಳಿಗೆ 5 ವರ್ಷಗಳ ಶಿಕ್ಷೆ ವಿಧಿಸಿ ಹುಣಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಹುಣಸೂರು ಪಟ್ಟಣದ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪಾಟೀಲ್ ಮೋಹನ್ ಕುಮಾರ್ ಭೀಮನಗೌಡ ಅವರು ಪ್ರಕರಣದ ವಿಚಾರಣೆ ನಡೆಸಿ ಮೂವರು ತಪ್ಪಿತಸ್ಥರೆಂದು ತೀರ್ಮಾನಿಸಿ, 5 ವರ್ಷಗಳ ಸಜೆ, ತಲಾ 35 ಸಾವಿರ ರೂ. ದಂಡವನ್ನು ವಿಧಿಸಿ ಶುಕ್ರವಾರ ತೀರ್ಪು ನೀಡಿರುತ್ತಾರೆ. ದಂಡದ ಹಣದಲ್ಲಿ 105,000 ರೂ. ಅನ್ನು ಗಾಯಾಳುವಾದ ಶರತ್ ಕುಮಾರ್ರವರಿಗೆ ಪರಿಹಾರದ ರೂಪದಲ್ಲಿ ಪಾವತಿಸಬೇಕೆಂದು ಆದೇಶಿಸಿದ್ದಾರೆ.
2013 ರ ಫೆಬ್ರವರಿ 12 ರಂದು ರಾತ್ರಿ 9.30 ರ ಸಮಯದಲ್ಲಿ ಪಿರಿಯಾಪಟ್ಟಣ ನಿವಾಸಿಗಳಾದ ಭರತ್ ಕುಮಾರ್, ಶರತ್ ಕುಮಾರ್ ಎಂಬ ಸಹೋದರರು ಮದುವೆ ಮಂಟಪದಲ್ಲಿ ಹೂವಿನ ಆಲಂಕಾರದ ಕೆಲಸ ಮಾಡುತ್ತಿದ್ದರು. ಈ ವೇಳೆ ಪಿರಿಯಾಪಟ್ಟಣದ ಗೋವಿಂದ ಅವರ ಮಗ ರಾಮು, ವೆಂಕಟಾಚಲ ಅವರ ಮಗ ಕಿರಣ್, ಉಸ್ಮಾನ್ ಅವರ ಮಗ ಅಭಿ @ ಸುಲೈಮಾನ್ ಅವರು ಆಟೋದಲ್ಲಿ ಬಂದು ಹಳೇ ದ್ವೇಷದಿಂದ ಭರತ್ ಕುಮಾರ್, ಶರತ್ ಕುಮಾರ್ ಅವರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ತಕ್ಷಣ ತಪ್ಪಿಸಿಕೊಂಡ ಶರತ್ ಕುಮಾರ್ ಅವರ ಬಲಭಾಗದ ದವಡೆಗೆ ರಾಡ್ ತಾಗಿದೆ. ಅವರ ಮೇಲೆ ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು.
ಮೂವರು ಅಪರಾಧಿಗಳ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲಿಸಿ ಪಿರಿಯಾಪಟ್ಟಣ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.