ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅಪರೂಪದ ಘಟನೆ

1 min read

ಬಂಡೀಪುರ: ಆನೆ ಒಂದು ಹೆರೋದೆ ಕಷ್ಟದ ಕೆಲಸ ಆದರೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಇದು ತೀರ ಅಪರೂಪ ಸಂಗತಿಯಾಗಿದೆ.

ಇಲಾಖೆಯವರು ಮತ್ತು ಪ್ರವಾಸಿಗರಿಗೆ ಆನೆ ಹಾಗೂ ಮರಿಗಳ ದರ್ಶನವಾಗಿದೆ. ಬಂಡೆಗಳ ನಡುವೆ ಸಂಗ್ರಹವಾಗಿರುವ ಮಳೆಯ ನೀರಿನಲ್ಲಿ ಜಲ ಕ್ರೀಡೆಯಲ್ಲಿ ನಿರತವಾಗಿದ್ದ ಮರಿಗಳನ್ನು ತಾಯಿ ಆನೆ ಕಣ್ತುಂಬಿಕೊಳ್ಳುತ್ತಿರುವ ಚಿತ್ರ ತೆಗೆದಿದ್ದಾರೆ. ಬಂಡೀಪುರದಲ್ಲಿ ಸೋಲಿಗರೂ 40 ವರ್ಷದಿಂದ ಇಂತಹ ಅವಳಿ ಮರಿಗಳ ದರ್ಶನ ಪಡೆದಿಲ್ಲ. ಬಹುಶಃ ಇದು ಬಂಡೀಪುರದ ಇತಿಹಾಸದಲ್ಲಿ ಪ್ರಥಮ ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆನೆಯ ಗರ್ಭಧಾರಣೆ ಅವಧಿ ಸುಮಾರು 22 ತಿಂಗಳು. ಇದು ಬೇರೆಲ್ಲ ಪ್ರಾಣಿಗಳಿಗಿಂತ ಹೆಚ್ಚು. ಆನೆಗಳು ಒಂದು ಬಾರಿಗೆ ಒಂದು ಮರಿಗೆ ಮಾತ್ರ ಜನ್ಮ ನೀಡುವುದು ಸಾಮಾನ್ಯ. ನವಜಾತ ಮರಿ ಸುಮಾರು ಎರಡೂವರೆ ಮೂರು ಅಡಿ ಎತ್ತರ, 70-80 ಕೆಜಿ ಇರುತ್ತದೆ. ಒಂದು ಮರಿಯೇ ಇಷ್ಟು ತೂಗಿದರೆ ಅವಳಿ ಮರಿಗಳನ್ನು ಕಾಪಾಡಿಕೊಳ್ಳುವುದು ಸಾಹಸವೇ ಸರಿ.

ತ.ನಾಡು ಅರಣ್ಯದಲ್ಲಿದ್ದ ‘ಜೋಡಿಗಳು’: ತೀರ ಅಪರೂಪ ಎನಿಸಿದರೂ ರಾಜ್ಯಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲ ಮತ್ತು ಮಧುಮಲೈ ಅರಣ್ಯದಲ್ಲಿ ತಲಾ ಒಂದು ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದ್ದವು. 2016ರಲ್ಲಿ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಟಿಎಂ ಪಾಳ್ಯ ವಲಯದ ತೆಂಗುಮರಹಡ ಎಂಬಲ್ಲಿ ಕಾಡಾನೆ ಅವಳಿಗೆ ಜನ್ಮ ನೀಡಿತ್ತು. ಅಂತೆಯೆ, ಬಂಡೀಪುರಕ್ಕೆ ಹೊಂದಿಕೊಂಡಿರುವ ಮಧುಮಲೈ ಶಿಬಿರದಲ್ಲೂ ಹಿಂದೆ ದೇವಕಿ ಎಂಬ ಸಾಕಾನೆ ಅವಳಿ ಮರಿಗಳಿಗೆ ಜನ್ಮ ನೀಡಿತ್ತು. ಆ ಮರಿಗಳಿಗೆ ವಿಜಯ್ ಮತ್ತು ಸುಜಯ್ ಎಂಬ ಹೆಸರಿಡಲಾಗಿತ್ತು.

About Author

Leave a Reply

Your email address will not be published. Required fields are marked *