KRS ಸಮೀಪ ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಸಭಾ ಸ್ಪೀಕರ್ಗೆ ಮನವಿ ಸಲ್ಲಿಸಿದ ಸುಮಲತಾ!
KRS ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರುವ ಸಂಸದೆ ಸುಮಲತಾ ಲೋಕಸಭಾ ಸ್ಪೀಕರ್ ಆದ ಶ್ರೀ. ಓಂ.ಬಿರ್ಲಾ ಹಾಗೂ ಕೇಂದ್ರ ಸಂಸದೀಯ ವ್ಯವಹಾರ ಸಚಿವರಾದ ಶ್ರೀ. ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಅಣೆಕಟ್ಟೆಗೆ ಆಗುವ ಅಪಾಯದ ಕುರಿತು ಮನವಿ ಸಲ್ಲಿಸಿದ್ದಾರೆ.

ಮಾನ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕೊಟ್ಟ ಪತ್ರದ ಸಾರಾಂಶ ಹೀಗಿದೆ
ಕೆ.ಆರ್.ಎಸ್ ಆಣೆಕಟ್ಟು ಕರ್ನಾಟಕ ಜನತೆಗೆ ಮೈಸೂರು ಮಹಾರಾಜರ ಕೊಡುಗೆ. ಅದಕ್ಕೆ ಐತಿಹಾಸಿಕ ಮಹತ್ವ ಇದೆ. ಕೋಟ್ಯಾಂತರ ಜನರ ಅನ್ನ ನೀರಿಗೆ ಅದುವೇ ಜೀವನಾಡಿ.
ಅನೇಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪೋಟಕಗಳ ಬಳಕೆಯಿಂದ ಡ್ಯಾಮ್ ಕಟ್ಟಡಕ್ಕೆ ಹಾನಿಯಾಗುತ್ತಿರುವ ವಿಷಯವನ್ನು ಸುಪ್ರೀಮ್ ಕೋರ್ಟ್ ಕೂಡ ಪ್ರಸ್ತಾಪಿಸಿದೆ.
ನಿಮ್ಮ ಗಮನಕ್ಕೆ ತರಬೇಕಾದ ಮತ್ತೊಂದು ವಿಷಯವೆಂದರೆ, ಅಕ್ರಮ ಗಣಿಗಾರಿಕೆ ಮಾಡುವವರು ಸರ್ಕಾರಕ್ಕೆ ಉಳಿಸಿಕೊಂಡಿರುವ ರಾಜಧನ ಮತ್ತು ದಂಡದ ಬಾಬ್ತು. ಅಧಿಕಾರಿಗಳು, ರಾಜಕಾರಣಿಗಳು ಮುಂತಾದವರ ಬೆಂಬಲವಿಲ್ಲದೆ ಅಕ್ರಮ ಗಣಿಗಾರಿಕೆ ಮುಂದುವರಿಸುವುದು ಅಸಾಧ್ಯ.

ಸತ್ಯಾಸತ್ಯತೆಯನ್ನು ತಿಳಿಯಲು ಮತ್ತು ಅಕ್ರಮ ಗಣಿಗಾರಿಕೆಯ ವ್ಯಾಪಕತೆ ಕಂಡುಹಿಡಿಯಲು ಡ್ರೋನ್ ಸರ್ವೇ ಮಾಡಲು ಮನವಿ ಮಾಡುತ್ತೇನೆ.
ಅಕ್ರಮ ಗಣಿಗಾರಿಕೆಯ ವಿರುದ್ಧ ಕಠಿಣವಾದ ನಿಲುವನ್ನು ತಳೆದು, ಸರ್ಕಾರಕ್ಕೆ ಸಲ್ಲಬೇಕಾದ ಎಲ್ಲಾ ಬಾಬ್ತು ವಸೂಲಿಗೆ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡುತ್ತೇನೆ. ಜನರಿಗೆ, ಅಣೆಕಟ್ಟೆಗೆ ತೊಂದರೆ ಉಂಟುಮಾಡುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಲು ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆ.”
ಸನ್ಮಾನ್ಯ ಲೋಕಸಭಾ ಸ್ಪೀಕರ್ ಶ್ರೀ. ಓಂ ಬಿರ್ಲಾ ಅವರಿಗೆ ಕೊಟ್ಟ ಪತ್ರದ ಸಾರಾಂಶ
“ಸುಪ್ರೀಮ್ ಕೋರ್ಟ್ ಸೂಚನೆಯ ಹೊರತಾಗಿಯೂ ಕೆ.ಆರ್.ಎಸ್ ಅನೇಕಟ್ಟೆಯ ಸುತ್ತಮುತ್ತ ಅಕ್ರಮ ಗಣಿಗಾರಿಗೆಯ ಚಟುವಟಿಕೆಗಳು ಮುಂದುವರೆದಿದೆ.
ಅಲ್ಲಿನ ಸ್ಥಳೀಯ ಜನರು, ರೈತರು ಇದರ ಬಗ್ಗೆ ನನಗೆ ಸಾಕಷ್ಟು ದೂರು ಕೊಟ್ಟಿದ್ದಾರೆ. ಅವರು ಹೇಳುವಂತೆ, ಸ್ಪೋಟಕಗಳ ಬಳಕೆಯಿಂದ ಅಣೆಕಟ್ಟೆಯಲ್ಲಿ ಬಿರುಕು ಬಿಡುವ ಅಪಾಯವಿದೆ. ಗಣಿಗಾರಿಕೆಯಿಂದ ಪರಿಸರದ ಮೇಲೆ ಸಾಕಷ್ಟು ಹಾನಿಯಾಗಿ, ಮನುಷ್ಯರು ಮತ್ತು ಜಾನುವಾರುಗಳಿಗೆ ತೊಂದರೆಯಾಗಿದೆ. ಗರ್ಭಪಾತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ.

ರಂಗನತಿಟ್ಟು ಪಕ್ಷಿಧಾಮ ಮುಂತಾದ ಕಡೆ ವನ್ಯಜೀವಿಗಳಿಗೂ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ. ಕುಡಿಯುವ ನೀರು ಕಲುಷಿತವಾಗಿದೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದಲ್ಲದೆ ಸುತ್ತಲಿನ ಹಳ್ಳಿಗಳಲ್ಲಿ ಮನೆಗಳಿಗೆ ದಕ್ಕೆಯಾಗಿದೆ. ಇದೆಲ್ಲದರಿಂದ ಬೇಸತ್ತ ಹಳ್ಳಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈ ಎಲ್ಲಾ ಸನ್ನಿವೇಶದಲ್ಲಿ ನೀವು ಸಿ.ಬಿ.ಐ ರೀತಿಯ ಯಾವುದಾದರೂ ಕೇಂದ್ರೀಯ ತನಿಖಾ ತಂಡದಿಂದ ಕೂಲಂಕುಷವಾಗಿ ತನಿಖೆಗೆ ಆದೇಶಿಸಬೇಕೆಂದು ಕೋರುತ್ತೇನೆ. ಇದು ಕೋಟ್ಯಾಂತರ ಜನರ ಜೇವನ ಮತ್ತು ಜೀವನೋಪಾಯದ ಪ್ರಶ್ನೆಯಾಗಿದೆ.”
ಮುಂದಿನ ದಿನಗಳಲ್ಲಿ ಕೇಂದ್ರದ ಇನ್ನಿತರ ಸಚಿವರುಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಕೆ.ಆರ್.ಎಸ್ ಉಳಿಸಲು ಸರ್ವ ಪ್ರಯತ್ನಕ್ಕೆ ಸಜ್ಜಾಗಿದ್ದೇನೆಂದು ಇದೇವೇಳೆ ಸುಮಲತಾ ತಿಳಿಸಿದ್ದಾರೆ.