ಕಂಠೀರವ ಸ್ಟುಡಿಯೋದಲ್ಲೇ ಪುನೀತ್ ಅಂತ್ಯಕ್ರಿಯೆ. ಕುಟುಂಬದ ಆಸೆಯಂತೆಯೇ ಕ್ರಮ- ಸಿಎಂ ಬೊಮ್ಮಾಯಿ!

ಬೆಂಗಳೂರು, ಅ 30: ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಂಠೀರವ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಮೆರವಣಿಗೆ ನಾಳೆ ಬೆಳಿಗ್ಗೆ 5.30 ರಿಂದ 6.30 ವೇಳೆಗೆ ಹೊರಟು ಕಂಠೀರವ ಸ್ಟುಡಿಯೋಕ್ಕೆ ತಲುಪಲಿದೆ ಎಂದರು.

ಸ್ಟುಡಿಯೋದೊಳಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಹಾಲು ತುಪ್ಪ ಕಾರ್ಯ ನೆರವೇರಿದ ಮೇಲೆ ಸೂಕ್ತ ವ್ಯವಸ್ಥೆಗಳನ್ನು ಹಾಗೂ ಸುರಕ್ಷತೆ ಕಲ್ಪಿಸಿದ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಾಡಿನ ಮಹಾಜನತೆಗೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿಗಳು

ಆಸ್ಪತ್ರೆ ಹಾಗೂ ಕ್ರೀಡಾಂಗಣದಲ್ಲಿ ಪುನೀತ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸುವ ವೇಳೆ ನಾಡಿನ ಮಹಾಜನತೆ ಹಾಗೂ ಪುನೀತ್ ಅವರ ಅಭಿಮಾನಿ ಬಂಧುಗಳು ಸಂಯಮ, ಶಾಂತಿ ಮತ್ತು ಶಿಸ್ತಿನಿಂದ ನಡೆದುಕೊಂಡಿದ್ದಕ್ಕಾಗಿ ರಾಜ್ಯದ ಮಹಾಜನತೆಗೆ ಮುಖ್ಯಮಂತ್ರಿಗಳು ಕೃತಜ್ಞತೆಗಳನ್ನು ಸಲ್ಲಿಸಿದರು.

About Author

Leave a Reply

Your email address will not be published. Required fields are marked *