ಕರಾಮುವಿವಿಗೆ ಯುಜಿಸಿಯಿಂದ ಅತ್ಯುತ್ತಮ ಶ್ರೇಯಾಂಕ ವಿಚಾರ: ಕುಲಪತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ
ಮೈಸೂರು,ಜ.26-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿಯಿಂದ ಅತ್ಯುತ್ತಮ ಶ್ರೇಯಾಂಕ ಗರಿಮೆ ಸಿಕ್ಕಿದೆ. ಆದರೆ ಈ ವಿಚಾರವಾಗಿ ಕುಲಪತಿ ವಿರುದ್ಧ ರಾಜ್ಯಪಾಲರಿಗೆ ವಿಶ್ರಾಂತಿ ಉಪ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅವರು ದೂರು ನೀಡಲು ನಿರ್ಧರಿಸಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಮೇಗೌಡ ಅವರು, ವಿವಿಯ ಉಪ ಕಲಪತಿ ಎಸ್. ವಿದ್ಯಾಶಂಕರ್ ವಿರುದ್ಧ ರಾಜ್ಯಪಾಲರಿಗೆ, ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಲು ನಿರ್ಧರಸಿರುವುದಾಗಿ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಮುಕ್ತ ವಿವಿ ಉಪ ಕುಲಪತಿಯಿಂದ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದು, ಕೇವಲ ಪ್ರಚಾರಕ್ಕಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
2018-19ನೇ ಸಾಲಿನ ವಿವಿಯ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಅತ್ಯುತ್ತಮ ಶ್ರೇಯಾಂಕ ಲಭಿಸಿದೆ. ಸದ್ಯ ಈಗಿರುವ ಕುಲಪತಿಗಳು ಆ ಸಾಧನೆಯನ್ನು ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಸಲಿಗೆ ಇವರು ಆ ಶೈಕ್ಷಣಿಕ ವರ್ಷದಲ್ಲಿ ಉಪ ಕುಲಪತಿಯೇ ಆಗಿರಲಿಲ್ಲ. ಮುಕ್ತ ವಿವಿ ಶಿಕ್ಷಣ ನೀಡಬೇಕೇ ಹೊರತು ದಾನ-ಧರ್ಮ ಮಾಡುವಂತಿಲ್ಲ. ಉಪ ಕುಲಪತಿಗಳು ಮುಕ್ತ ವಿವಿಯ ಹಣಕಾಸು ವಿಚಾರದಲ್ಲಿ ಲೋಪ ಎಸಗಿದ್ದು, ಮಾಗಡಿ ಸಂಸ್ಕೃತ ವಿವಿಗೆ ಕಟ್ಟಡ ಕಟ್ಟಿಕೊಡುತ್ತಿದ್ದಾರೆ. ಇದು ಮುಕ್ತ ವಿವಿಯ ಮುಖ್ಯ ಉದ್ದೇಶಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆಪಾದಿಸಿದ್ದಾರೆ.
ಇದಲ್ಲದೆ ರಿಜಿನಲ್ ಸೆಂಟರ್ ಗಳಿಗೆ ಕಟ್ಟಡಗಳ ಅವಶ್ಯಕತೆ ಇಲ್ಲ. ಈಗಿದ್ದರೂ ಸರಿ ಸುಮಾರು 100ಕೋಟಿ ಹಣವನ್ನು ವ್ಯಯಿಸಿ ರಿಜಿನಲ್ ಸೆಂಟರ್ ಗಳನ್ನು, ಹೈಸ್ಕೂಲ್ ಕಟ್ಟಡ ಕಟ್ಟಲು ಮುಂದಾಗುತ್ತಿದ್ದಾರೆ. ಈಗಾಗಲೇ ಶಿಕ್ಷಣದ ಉದ್ದೇಶಕ್ಕೆ ಕಟ್ಟಿರುವ ರಿಜನಲ್ ಸೆಂಟರ್ ಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸಿರುವ ಉದಾಹರಣೆ ಮೈಸೂರಿನಲ್ಲಿದೆ. ಹೀಗಾಗಿ ದೂರು ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.