ಬಸವೇಶ್ವರರಿಗೆ ತೆಲಂಗಾಣ ಸರ್ಕಾರದ ಗೌರವ: ಲಿಂಗಾಯಿತ ಗೌಡ ಮಹಾಸಭಾ ರಾಜ್ಯ ಕಾರ್ಯದರ್ಶಿ ಕೇಬಲ್ ಮಹೇಶ್ ಸ್ವಾಗತಿಸಿದ್ದಾರೆ
ಸರ್ಕಾರದಿ೦ದಲೇ ಬಸವ ಜಯಂತಿ ಆಚರಣೆಗೆ ಆದೇಶ ಹೊರಡಿಸುವ ಮೂಲಕ ತೆಲಂಗಾಣ ಸರ್ಕಾರವು ಜಗಜ್ಯೋತಿ ಬಸವೇಶ್ವರರನ್ನು ಗೌರವಿಸಿದೆ. ಎಂದು ಲಿಂಗಾಯಿತ ಗೌಡ ಮಹಾಸಭಾ ರಾಜ್ಯ ಕಾರ್ಯದರ್ಶಿ ಕೇಬಲ್ ಮಹೇಶ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕೆ ಪ್ರಕಟಣೆ ನೀಡಿದ ಅವರು ಬಸವ ಜಯಂತಿ ಆಚರಣೆ ಸ೦ಬ೦ಧ ತೆಲಂಗಾಣ ಸರ್ಕಾರ ಈಗಾಗಲೇ ಭಾಷೆ ಮತ್ತು ಸಂಸ್ಕೃತಿ ಇಲಾಖೆಗೆ ಆದೇಶ ಹೊರಡಿಸಿದೆ. ತೆಲಂಗಾಣದಲ್ಲಿ ಬಸವಾನುಯಾಯಿಗಳು ಅಧಿಕ ಸಂಖ್ಯೆಯಲ್ಲಿದ್ದು, ಅಲ್ಲಿಯ ಸರ್ಕಾರದ ನಿರ್ಧಾರವು ದೇಶದ ಎಲ್ಲೆಡೆಯ ಬಸವ ಭಕ್ತರಿಗೆ ಸಂತಸ ಉಂಟು ಮಾಡಿದೆ.
ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸರ್ಕಾರದಿಂದಲೇ ಬಸವ ಜಯಂತಿ ಆಚರಿಸಲಾಗುತ್ತಿದೆ. ಇದೀಗ ತೆಲಂಗಾಣ ಮೂರನೇ ರಾಜ್ಯವಾಗಿದೆ ಎಂದು ಹೇಳಿದ್ದಾರೆ. ಬಸವಣ್ಣನವರ ತತ್ವಗಳ ವಿಶ್ವವ್ಯಾಪಿ ಪ್ರಚಾರ, ಪ್ರಸಾರ ಆಗಬೇಕಾಗಿದೆ. ಬಸವೇಶ್ವರ ಜಯಂತಿ ಆಚರಿಸಲು ಆದೇಶ ಹೊರಡಿಸಿದ್ದಕ್ಕೆ ತೆಲಂಗಾಣ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಲಿಂಗಾಯಿತ ಗೌಡ ಮಹಾಸಭಾ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.