ಕಣ್ಣಾ ಮುಚ್ಚಾಲೆ ಆಟಕ್ಕೆ ಇಬ್ಬರು ಬಾಲಕಿಯರ ಧಾರುಣ ಸಾವು!
ನಂಜನಗೂಡು: ಬೇಸಿಗೆಯ ರಜೆಯ ಪ್ರಾರಂಭದಲ್ಲೆ ಮಕ್ಕಳಿಬ್ಬರ ದುರಂತ ಸಾವು. ಹಳ್ಳಿಯ ಸೊಗಡಿನ ಕಣ್ಣಾ ಮುಚ್ಚಾಲೆ ಆಟಕ್ಕೆ ನಿರಂತರವಾಗಿ ಕಣ್ಣುಮುಚ್ಚಿದ ಇಬ್ಬರು ಬಾಲಕಿಯರ ಧಾರುಣ ಸಾವು.
ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಘಟನೆ ನಡೆದಿದ್ದು ಕಣ್ಣಾ ಮುಚ್ಚಾಲೆ ಆಟ ಆಡುವಾಗ ಐಸ್ ಕ್ರೀಮ್ ಬಾಕ್ಸ್ ಗೆ ಬಾಲಕಿಯರು ಸಿಲುಕಿದ್ದಾರೆ. ಆಟ ಆಡುತ್ತಿರುವ ಸಂದರ್ಭದಲ್ಲಿ ಐಸ್ ಕ್ರೀಮ್ ಬಾಕ್ಸ್ ಒಳಗೆ ಬಾಲಕಿಯರು ಸಿಲುಕಿಕೊಂಡಿದ್ದಾರೆ. ಐಸ್ ಕ್ರೀಮ್ ಬಾಕ್ಸ್ ಬಾಗಿಲು ತೆರೆಯಲಾಗದೆ ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ.

ಮಸಗೆ ಗ್ರಾಮದ ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12 ವರ್ಷ), ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7 ವರ್ಷ) ಮೃತಪಟ್ಟವರು.
ಈ ಯಮಸ್ವರೂಪಿ ಐಸ್ ಕ್ರೀಮ್ ಬಾಕ್ಸ್ ತಗಡೂರು ಗ್ರಾಮದ ಹನುಮಂತನಾಯಕ ಎಂಬುವರಿಗೆ ಸೇರಿದ್ದಾಗಿದೆ. ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಐಸ್ ಕ್ರೀಮ್ ಬಾಕ್ಸ್ ಒಳಗೆ ಮೃತ ಬಾಲಕಿಯರು ಸಿಲುಕಿದ್ದರು. ಸುಮಾರು 2 ಗಂಟೆ ಸಮಯ ಕಳೆದರೂ ಹೊರಬರದ ಕಾರಣ ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ.
ನಂಜನಗೂಡು ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಮಸಗೆ ಗ್ರಾಮ ಸೇರಿದೆ. ಯಾವುದೆ ದೂರು ದಾಖಲಿಸದೆ ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನಡೆಸಲಾಗಿದೆ. ಮಸಗೆ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.