20 ವರ್ಷಗಳ ನಂತರ ಹರಿದ ಜಯಮಂಗಲಿ ನದಿ.!
ತುಮಕೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಜೋರು ಮಳೆಯಾಗಿದ್ದು, ಕೆರೆ, ಕಟ್ಟೆಗಳು ಭರ್ತಿಯಾಗಿವೆ.
ಕೊರಟಗೆರೆ, ಮಧುಗಿರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಸುಮಾರು 20 ವರ್ಷಗಳ ನಂತರ ಜಯಮಂಗಲಿ ನದಿ ತುಂಬಿ ಹರಿಯುತ್ತಿದೆ. ನದಿ ಹರಿಯುವುದನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಜಮಾಯಿಸುತ್ತಿದ್ದಾರೆ.
ಮೊಬೈಲ್‌ಗಳಲ್ಲಿ ಫೋಟೊ ತೆಗೆದುಕೊಂಡು, ವಿಡಿಯೊ ಮಾಡಿಕೊಂಡು ಇತರರಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಕಳೆದ ಕೆಲ ವರ್ಷಗಳಿಂದ ಒಣಗಿ ನಿಂತಿದ್ದ, ನೀರನ್ನೇ ಕಾಣದ ಕೆರೆಗಳಿಗೂ ಜೀವ ಕಳೆ ಬಂದಿದೆ. ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಕೋಡಿ ಹರಿಯುತ್ತಿದೆ. ಕೆರೆ ಕೋಡಿಯಲ್ಲಿ ನೀರು ಹರಿಯುವುದನ್ನು ನೋಡಲು ಜನರು ಬರುತ್ತಿದ್ದಾರೆ.