ನಟ ವಿವೇಕ್ ಸಾವಿಗೆ ಕೊರೊನಾ ಲಸಿಕೆ ಕಾರಣವಲ್ಲ: ಸರ್ಕಾರದ ವರದಿ
1 min read
ಚೆನ್ನೈ,ಅ.23-ಜನಪ್ರಿಯ ಕಾಲಿವುಡ್ ನಟ ವಿವೇಕ್ ಹೃದಯಾಘಾತದಿಂದ ನಿಧನರಾಗಿದ್ದು, ಕೋವಿಡ್ ವ್ಯಾಕ್ಸಿನೇಷನ್ ನಿಂದಾಗಿ ಅವರು ಸಾವನ್ನಪ್ಪಿಲ್ಲ ಎಂದು ಸರ್ಕಾರದ ವರದಿಯಿಂದ ತಿಳಿದುಬಂದಿದೆ.
ವಿವೇಕ್ ಅವರು ಸಾಯುವ ಎರಡು ದಿನಗಳ ಮೊದಲು ಏ.15 ರಂದು ಕೋವಿಡ್ -19 ಲಸಿಕೆಯನ್ನು ತೆಗೆದುಕೊಂಡಿದ್ದರು. ಏಪ್ರಿಲ್ 16 ರಂದು ವಿವೇಕ್ ಅವರಿಗೆ ಹೃದಯಾಘಾತವಾಗಿ ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಏ.17 ರಂದು ಕೊನೆಯುಸಿರೆಳೆದರು.
ವಿವೇಕ್ ಸಾವಿಗೂ ಕೊರೊನಾ ಲಸಿಕೆಗೂ ಸಂಬಂಧವಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ ಹೊರತಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿಗೆ ಲಸಿಕೆ ಕಾರಣ ಎಂಬ ಊಹಾಪೋಹಗಳನ್ನು ಹರಡಲಾಗಿತ್ತು. ಇದರಿಂದ ಜನರು ಲಸಿಕೆ ಪಡೆಯಲು ಸ್ವಲ್ಪ ಮಟ್ಟಿಗೆ ಹಿಂಜರಿದಿದ್ದರು.
ಇದೀಗ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಇಮ್ಯೂನೈಸೇಶನ್ ವಿಭಾಗ, ಇಮ್ಯೂನೈಸೇಶನ್ ನಂತರದ ಗಂಭೀರ ಪ್ರತಿಕೂಲ ಘಟನೆಗಳ ವರದಿಯಲ್ಲಿ ನಟನ ಸಾವಿಗೆ ಲಸಿಕೆ ಕಾರಣ ಎಂಬುದನ್ನು ತಳ್ಳಿ ಹಾಕಿದೆ.