ಕೇಂದ್ರ ಬಜೆಟ್: 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ; ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಯೋಜನೆ ಘೋಷಣೆ

1 min read

ನವದೆಹಲಿ,ಫೆ.1-2022-23 ರ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವರು 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದಾರೆ.
ಜೊತೆಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜನಕ್ಕಾಗಿ ಹಲವಾರು ಮಹತ್ವದ ಘೋಷಣೆ ಮಾಡಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕದಿಂದ ದೇಶದ ಜನತೆ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸಾಂಕ್ರಾಮಿಕ ಅವಧಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಅನೇಕ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನರ ಮಾನಸಿಕ ಆರೋಗ್ಯ ಸುಧಾರಣೆಗೆ ಯೋಜನೆಯನ್ನು ಪ್ರಕಟಿಸಿದೆ.
ಜನರ ಮಾನಸಿಕ ಆರೋಗ್ಯಕ್ಕಾಗಿ ರಾಷ್ಟ್ರ ಮಟ್ಟದ ಯೋಜನೆಯನ್ನು ಪ್ರಕಟಿಸಲಾಗಿದೆ. ಜನರ ಮಾನಸಿಕ ಆರೋಗ್ಯ ಸುಧಾರಣೆ, ಚಿಕಿತ್ಸೆಯ ನೆರವಿಗಾಗಿ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಯೋಜನೆಗೆ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ನೋಡಲ್ ಕೇಂದ್ರವಾಗಿರಲಿದೆ. ಒಟ್ಟು 23 ಟೆಲಿ ಮಾನಸಿಕ ಆರೋಗ್ಯ ಕೇಂದ್ರಗಳು ಜನರಿಗೆ ಟೆಲಿ ಸಂವಹನದ ಮೂಲಕ ಮಾನಸಿಕ ಚಿಕಿತ್ಸೆ ನೀಡಲಿದೆ. ಇದಕ್ಕೆ ಬೆಂಗಳೂರಿನ ಅಂತಾರಾಷ್ಟ್ರೀಯ ತಾಂತ್ರಿಕ ಸಂಸ್ಥೆ ತಂತ್ರಜ್ಞಾನ ನೆರವು ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಸ್ವಾವಲಂಬಿ ಭಾರತ ಯೋಜನೆಯಡಿ 16 ಲಕ್ಷ ಉದ್ಯೋಗಗಳನ್ನು ನೀಡಲಾಗುವುದು, ಇದೇ ಸಮಯದಲ್ಲಿ 60 ಲಕ್ಷ ಉದ್ಯೋಗಗಳನ್ನು ಮೇಕ್ ಇನ್ ಇಂಡಿಯಾ ಅಡಿ ಸೃಷ್ಟಿಸಲಾಗುವುದು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು ಹಾಗೂ ಇದರಿಂದಲೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು.
ರಾಷ್ಟ್ರೀಯ ಕೌಶಲ್ಯ ಅರ್ಹತಾ ಕಾರ್ಯಕ್ರಮವು ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿರಲಿದೆ, ರಾಜ್ಯ ಸರ್ಕಾರದ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸಲಾಗುವುದು, ಸಾಂಕ್ರಾಮಿಕ ರೋಗದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಶಾಲಾ ಮಕ್ಕಳ ಎರಡು ವರ್ಷಗಳ ಶಾಲಾ ಶಿಕ್ಷಣವು ವ್ಯರ್ಥವಾಗಿದೆ, ಡಿಟಿಎಚ್ ಪ್ಲಾಟ್ಫಾರ್ಮ್ನಲ್ಲಿ ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆಯಡಿ ಒಂದು ವರ್ಗಕ್ಕೆ ಒಂದು ಚಾನೆಲ್ ಯೋಜನೆಯನ್ನು ಘೋಷಿಸಿದೆ.
ಒಂದರಿಂದ ಹನ್ನೆರಡನೇ ತರಗತಿಯ ಮಕ್ಕಳಿಗೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಸೌಲಭ್ಯ ಒದಗಿಸಲಾಗುವುದು, ಡಿಜಿಟಲ್ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು. ಇದರಿಂದ ಡಿಜಿಟಲ್ ಉಪಕರಣಗಳನ್ನು ಉತ್ತಮವಾಗಿ ಬಳಸಬಹುದು, ಟಿವಿ, ಇಂಟರ್ನೆಟ್, ರೇಡಿಯೋ ಮತ್ತು ಇತರ ಡಿಜಿಟಲ್ ಮಾಧ್ಯಮಗಳ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಗುಣಮಟ್ಟದ ಬೋಧನಾ ಸಾಮಗ್ರಿಗಳು ಲಭ್ಯವಾಗುವಂತೆ ಮಾಡಲಾಗುವುದು. ಇದರಿಂದ ಶಿಕ್ಷಕರು ಇ-ವಿಷಯವನ್ನು ಪಡೆಯಬಹುದು.

About Author

Leave a Reply

Your email address will not be published. Required fields are marked *