ವಿವಾಹಿತನನ್ನು ಮದುವೆಯಾಗಿದ್ದ ಮಹಿಳೆ ಆತ್ಮಹತ್ಯೆ ಶರಣು
ಮೈಸೂರು,ಅ.5-ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ತಾವರೆ ಕಟ್ಟೆ ಗ್ರಾಮದಲ್ಲಿ ನಡೆದಿದೆ.
ವಿಜಯಲಕ್ಷ್ಮಿ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮದುವೆಯಾಗಿ ಎರಡು ಮಕ್ಕಳಿರುವ ವ್ಯಕ್ತಿಯನ್ನು ವಿವಾಹವಾಗಿದ್ದ ವಿಜಯಲಕ್ಷ್ಮಿ ಮದುವೆಗೆ ವರ್ಷ ತುಂಬುವ ಮುನ್ನವೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನನ್ನ ಪತಿಯ ಮೊದಲನೇ ಪತ್ನಿ ಹಾಗೂ ಆಕೆಯ ತಂಗಿಯೇ ಕಾರಣ ಎಂದು ಬರೆದಿದ್ದಾರೆ.
ಹನ್ನೊಂದು ತಿಂಗಳ ಹಿಂದಷ್ಟೇ ಮೈಸೂರಿನ ಚಾಮುಂಡಿಬೆಟ್ಟದ ನಿವಾಸಿ ಸೋಮು ಎಂಬಾತನನ್ನು ಮದುವೆಯಾಗಿದ್ದ ವಿಜಯಲಕ್ಷ್ಮಿ ಕೊನೆಗೆ ಅದೇ ಕಾರಣಕ್ಕಾಗಿ ಪಶ್ಚಾತ್ತಾಪಪಟ್ಟಿದ್ದಾಳೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ಸೋಮುವನ್ನು ನಾನು ಮದುವೆಯಾಗಿದ್ದು ದೊಡ್ಡ ತಪ್ಪು ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ.
ಸೋಮುವನ್ನು ನಾನೇ ಒತ್ತಾಯಿಸಿ ಮದುವೆಯಾದೆ. ಇದರಿಂದ ಅವರಿಗೂ ನೆಮ್ಮದಿಯಿಲ್ಲ. ನನಗೂ ನೆಮ್ಮದಿ ಇಲ್ಲದಂತಾಗಿದೆ. ನನ್ನಿಂದ ತುಂಬಾ ಜನರಿಗೆ ನೋವಾಗಿದೆ. ನನ್ನನ್ನು ಕ್ಷಮಿಸಿ ಎಂದು ಹೇಳಿರುಬ ವಿಜಯಲಕ್ಷ್ಮಿ ನನ್ನ ಸಾವಿಗೆ ಮೊದಲ ಪತ್ನಿ ಹಾಗೂ ಆಕೆಯ ತಂಗಿ ಕಾರಣ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.