ಮೈಸೂರು ಕೋರ್ಟ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣ: ಮೂವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟ
ಮೈಸೂರು,ಅ.12- ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸಿ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಅಲ್ ಖೈದಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ತಮಿಳುನಾಡಿನ ಬೇಸ್ ಮೂವ್‌ಮೆಂಟ್ ಸಂಘಟನೆಗೆ ಸೇರಿದ ನೈನರ್ ಅಬ್ಬಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಬಾಸ್, ಸಂಸುಲ್ ಕರೀಂ ಖಾನ್ ಅಲಿಯಾಸ್ ಕರೀಂ ಅಲಿಯಾಸ್ ಅಬ್ದುಲ್ ಕರೀಂ ಮತ್ತು ದಾವೂದ್ ಸುಲೈಮನ್ ಶಿಕ್ಷೆಗೊಳಗಾಗಿದ್ದಾರೆ.
ಇವರಲ್ಲಿ ನೈನರ್ ಅಬ್ಬಾಸ್ ಅಲಿಗೆ 10 ವರ್ಷ ಜೈಲು ಶಿಕ್ಷೆ, 43 ಸಾವಿರ ರೂ. ದಂಡ, ಸಂಸುಲ್ ಕರೀಂ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ, ದಾವೂದ್ ಸುಲೈಮಾನ್‌ಗೆ 10 ಜೈಲು ಶಿಕ್ಷೆ, 38 ಸಾವಿರ ರೂ. ದಂಡ ವಿಧಿಸಲಾಗಿದೆ. ಇವರೆಲ್ಲರೂ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
2016ರ ಆಗಸ್ಟ್ 1ರಂದು ಮಧ್ಯಾಹ್ನ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹೊಂದಿಕೊಂಡಂತಿರುವ ಶೌಚಾಲಯದಲ್ಲಿ ಕುಕ್ಕರ್ ಬಾಂಬ್ ಸ್ಪೋಟವಾಗಿತ್ತು.