ದಸರಾ ಉದ್ಘಾಟಕರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಾಳೆ ಮೈಸೂರಿಗೆ
ಮೈಸೂರು,ಅ.5-ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾದ ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರು ನಾಳೆ ಮೈಸೂರಿಗೆ ಆಗಮಿಸಲಿದ್ದಾರೆ.
ಎಸ್.ಎಂ.ಕೃಷ್ಣ ಅವರು ನಾಳೆ ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನಿಂದ ರಸ್ತೆಯ ಮೂಲಕ ಮೈಸೂರಿಗೆ ಹೊರಟು ಮಧ್ಯಾಹ್ನ 2ಗಂಟೆಗೆ ರ್ಯಾಡಿಸನ್ ಬ್ಲ್ಯೂ ಗೆ ಆಗಮಿಸಲಿದ್ದಾರೆ.
ಅಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಅ.7 ರಂದು ಬೆಳಿಗ್ಗೆ 7 ಗಂಟೆಗೆ ಚಾಮುಂಡಿಬೆಟ್ಟಕ್ಕೆ ತೆರಳಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಬಳಿಕ ಬೆಳಿಗ್ಗೆ 8 ರಿಂದ 9.30 ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ನೀಡಲಿದ್ದಾರೆ.
ಬಳಿಕ 9.45ಕ್ಕೆ ಚಾಮುಂಡಿಬೆಟ್ಟದಿಂದ ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಲಿದ್ದಾರೆ. 10.15ರಿಂದ 11.30 ರವರೆಗೆ ಸುತ್ತೂರು ಮಠದಲ್ಲಿದ್ದು,ಬಳಿಕ ಮತ್ತೆ ಹೋಟೆಲ್ ಗೆ ಮರಳಲಿದ್ದಾರೆ.
ಸಂಜೆ 4 ಗಂಟೆಗೆ ನಂಜನಗೂಡಿಗೆ ತೆರಳಿ 4.30ಕ್ಕೆ ನಂಜುಂಡೇಶ್ವರನ ದರ್ಶನ ಪಡೆದು ಸಂಜೆ 5ಗಂಟೆಗೆ ಅಲ್ಲಿಂದ ಬೆಂಗಳೂರಿಗೆ ತೆರಳಲಿದ್ದಾರೆ.