ಮೋದಿ ಅವರು 140 ಕೋಟಿಗೂ ಹೆಚ್ಚು ಜನರಿಗೆ ಅಪಮಾನ ಮಾಡಿದ್ದಾರೆ
ಮೈಸೂರು: ಎಲ್ಲಿ ರಾಷ್ಟ್ರ ಲಾಂಛನ ಇರಬೇಕಿತ್ತೋ ಅಲ್ಲಿ ಧರ್ಮ ಲಾಂಛನ ಇರಿಸಿದ ಪ್ರಧಾನಿ ಮೋದಿಯ ಕ್ರಮ ಸರಿಯಲ್ಲ ಅಂತ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನೂತನ ಸಂಸದ ಭವನದ ಉದ್ಘಾಟನೆಯ ಸಂದರ್ಭಗಳಲ್ಲಿ ನಡೆದ ಅಂದಿನ ಘಟನೆಗಳಿಂದ ಸಂವಿಧಾನದ ಅಣಕವಾಗಿವೆ. ಪ್ರಧಾನಿಯವರ ಸಮ್ಮುಖದಲ್ಲಿ ಸಂವಿಧಾನದ ಅಣಕವಾಗಿದೆ. ಸಂವಿಧಾನ ಬರೆದುಕೊಟ್ಟಿರುವ ಅಂಬೇಡ್ಕರ್ ಹೆಸರನ್ನು ಅಂದು ಪ್ರಸ್ತಾಪಿಸಲಿಲ್ಲ. ದೇಶದ ಪ್ರಥಮ ಪ್ರಜೆ ಹಾಗು ಸೇನೆಯ ಮೂರು ವಿಭಾಗಗಳ ತುಕಡಿಗಳಿಗೆ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯನ್ನು ಆಹ್ವಾನಿಸದೇ ಕಡೆಗಣಿಸಲಾಗಿದೆ ಅಂತ ಕಿಡಿ ಕಾರಿದರು.
ಒಂದರ್ಥದಲ್ಲಿ ಮೋದಿಯವರ ಪಟ್ಟಾಭಿಷೇಕದಂತೆ ಕಾರ್ಯಕ್ರಮ ನಡೆದಿದೆ. ಎಲ್ಲವೂ ನಾನೇ ಎಂದು ಬಿಂಬಿಸಿಕೊಳ್ಳಲು ಮೋದಿ ಈ ರೀತಿ ಮಾಡಿದ್ದಾರೆ. ಈ ಮೂಲಕ ದೇಶದ 140ಕೋಟಿಗೂ ಹೆಚ್ಚು ಜನರಿಗೆ ಅಪಮಾನ ಮಾಡಿದ್ದಾರೆ. ಎಲ್ಲಿ ರಾಷ್ಟ್ರ ಲಾಂಛನ ಇರಬೇಕಿತ್ತೋ ಅಲ್ಲಿ ಧರ್ಮ ಲಾಂಛನ ಇರಿಸಿದ ಪ್ರಧಾನಿ ಮೋದಿಯ ಕ್ರಮ ಸರಿಯಲ್ಲ. ಎಲ್ಲಾ ಧರ್ಮೀಯರನ್ನು ಒಳಗೊಂಡ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ. ನೂತನ ಸಂಸತ್ ಭವನದಲ್ಲಿ ಹೋಮ ಹವನ ನಡೆಸುವ ಮೂಲಕ ಮತ್ತೆ ಪುರೋಹಿತ ಶಾಯಿ ವ್ಯವಸ್ಥೆಯತ್ತ ಕೊಂಡೊಯ್ಯಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿದೆ. ಪ್ರಧಾನಮಂತ್ರಿ ಅವರಿಂದಲೇ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದರು.
ರಾಜ್ಯಗಳಿಗೆ ಜಿ ಎಸ್ ಟಿ ಹಂಚಿಕೆ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಷೆಯಾಗಬೇಕು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿಚಾರ ದೇಶದಾದ್ಯಂತ ಚರ್ಚೆಯಾಗಬೇಕು. ಮೋದಿಯವರ ಬಹಿರಂಗದ ಮಾತುಗಳೇ ಬೇರೆ, ಅಂತರಂಗದ ಮಾತುಗಳೇ ಬೇರೆಯಾಗಿವೆ. ಸಂಸತ್ ಭಾರತೀಯರ ಆತ್ಮವಿದ್ದಂತೆ. ಅಲ್ಲಿ ರಾಷ್ಟ್ರೀಯ ಲಾಂಛನ, ಅಶೋಕ ಚಕ್ರ ಇರಬೇಕಿತ್ತು. ಅಲ್ಲಿ ಧರ್ಮದ ಲಾಂಛನ ಇರಿಸಿದ್ದು ಸರಿಯಲ್ಲ. ಈಗಾಗಲೇ ಈ ಬಗ್ಗೆ ಚರ್ಚೆ ಆರಂಭವಾಗಬೇಕಿತ್ತು. ಆದರೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಹಾಗಾಗಿ ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಚರ್ಚೆಗಳು ನಡೆಯಬೇಕು ಎಲ್ಲರೂ ಧ್ವನಿ ಎತ್ತಬೇಕು ಎಂದು ಹೇಳಿದರು.
ಅರಸರ ಕಾಲದಲ್ಲಿ ರಾಜ ದಂಡವನ್ನು ಜನರನ್ನು ಹೆದರಿಸಿ ಆಡಳಿತ ನಡೆಸಲು ಬಳಸಲಾಗುತ್ತಿತ್ತು. ಆದರೆ ಈಗ ರಾಜದಂಡವನ್ನು ಸಂಸತ್ ನಲ್ಲಿ ಪ್ರತಿಷ್ಠಾಪಿಸುವ ಅಗತ್ಯವಿರಲಿಲ್ಲ. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂದು ಎಂಎಲ್ಸಿ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವಿಗೆ ಎಂಎಲ್ಸಿ ಎಚ್ ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಗಳು ಈಗಾಗಲೇ ಆರಂಭವಾಗಿವೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಆತುರ ತೋರಬಾರದು. ಪಠ್ಯಪುಸ್ತಕ ಪರಿಷ್ಕರಣೆಯಿಂದ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ತೊಂದರೆಯಾಗಬಾರದು. ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದೇ ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಾಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗೆ ದಾವೂದ್ ಇಬ್ರಾಹಿಂ ಜೊತೆ ನಂಟಿದೆ. ದಾವೂದ್ ಇಬ್ರಾಹಿಂಗೆ ಬ್ರಿಜ್ ಭೂಷಣ್ ಸಿಂಗ್ ಕ್ಲೋಸ್ ಅಸೋಸಿಯೇಟ್ಸ್ ಆಗಿದ್ದಾನೆ. ಅಂತವನ ರಕ್ಷಣೆಗೆ ಬಿಜೆಪಿ ನಿಂತಿರುವುದು ಸರಿಯಾದ ಕ್ರಮವಲ್ಲ. ಸಂಸತ್ ನಲ್ಲಿ ರಾಜದಂಡ ಪ್ರತಿಷ್ಡಾಪಿಸಿ, ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸರ ದಂಡ ಪ್ರಯೋಗಿಸಲಾಗಿದೆ. ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಎಂಎಲ್ಸಿ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿದ್ದಾರೆ.