4 ಕೋಟಿ ಕಾಮಗಾರಿಗೆ ಶಾಸಕ ಹರ್ಷವರ್ಧನ್ ಚಾಲನೆ!
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹರ್ಷ ವರ್ಧನ್ ಚಾಲನೆ.
ನಂಜನಗೂಡು : ತಾಲ್ಲೂಕಿನ ಹೊಸವೀಡು, ಯಡಿಯಾಲ, ಬಳ್ಳೂರು ಹುಂಡಿ ಗ್ರಾಮಗಳಲ್ಲಿ 4 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಹಾಗೂ ತಾಲ್ಲೂಕಿನ ಮಡಕೆಹುಂಡಿ, ಹೊಸವೀಡು, ಕೊತ್ತನಳ್ಳಿ, ಹಂಚೀಪುರ, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಹರ್ಷವರ್ಧನ್ ಚಾಲನೆ ನೀಡಿದ್ದಾರೆ.
- ಶನಿವಾರ 4ಕೋಟಿ 65 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, ಈ ಭಾಗದ ಕೃಷಿ ಭೂಮಿ ಮಳೆಯಾಶ್ರಿತವಾಗಿದ್ದು ಕೃಷಿಗಾಗಿ ನೀರಿನ ಕೊರತೆ ಉಂಟಾಗಿತ್ತು. ಈ ಭಾಗದ ಜನರ ಬಹುದಿನದ ನಿರೀಕ್ಷೆಯಂತೆ ಕೃಷಿ ಭೂಮಿಗಳಿಗೆ ಹಾಗೂ ಅಂತರ್ಜಲ ಹೆಚ್ಚಿಸಿ ನೀರಿನ ಅನುಕೂಲ ಕಲ್ಪಿಸಲು ಚೆಕ್ ಡ್ಯಾಂಗಳನ್ನು ನಿರ್ಮಿಸಲು ಚಾಲನೆ ನೀಡಲಾಗಿದೆ. ಈ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳಲಿದ್ದು ಈ ಭಾಗದಲ್ಲಿ ವ್ಯವಸಾಯ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ ಎಂದರು. ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ತಾಲ್ಲೂಕಿನ ಮಡಕೆಹುಂಡಿ, ಚನ್ನಪಟ್ಟಣ, ಹೊಸವೀಡು, ಹಂಚೀಪುರ, ಕೊತ್ತನಹಳ್ಳಿ ಗ್ರಾಮಗಳಲ್ಲಿ ತಲಾ 15 ಲಕ್ಷ ರೂ ವೆಚ್ಚದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಸಹ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂಧರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ತಾಪಂ ಮಾಜಿ ಸದಸ್ಯರಾದ ಬಿ.ಎಸ್.ರಾಮು, ಬಸವರಾಜು, ದೇವರಾಯಶೆಟ್ಟಿಪುರ ಗ್ರಾಪಂ ಅಧ್ಯಕ್ಷೆ ವನಿತಾ ಕುಮಾರ್, ಹುರಾ ಗ್ರಾಪಂ ಅಧ್ಯಕ್ಷ ಚಂದ್ರು, ಮುಖಂಡರಾದ ಪುಟ್ಟಸ್ವಾಮಿ, ಶಿವರುದ್ರ, ಶಿವನಾಗಪ್ಪ, ಸಣ್ಣಯ್ಯ, ಹಾಡ್ಯಶಂಕರ್, ಮಹದೇವಸ್ವಾಮಿ, ಧನರಾಜಬೂಲ, ನಗರಸಭಾ ಸದಸ್ಯ ರಂಗಸ್ವಾಮಿ, ಸಣ್ಣನಿರಾವರಿ ಇಲಾಖೆ ಎಇಇ ಯೋಗೀಶ್, ಎಇ ಬಸವಣ್ಣ ಉಪಸ್ಥಿತರಿದ್ದರು.