ಧಾರಾಕಾರ ಮಳೆಗೆ ತತ್ತರಿಸಿದ ಸಾಂಸ್ಕೃತಿಕ ನಗರಿ
ಮೈಸೂರು: ಧಾರಾಕಾರ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರು ತತ್ತರಿಸಿದೆ. ಮತ್ತೆ ಮತ್ತೆ ಕಟ್ಟಡಗಳು ಕುಸಿಯುತ್ತಿವೆ. ಮಳೆಯ ಆರ್ಭಟಕ್ಕೆ ನಿನ್ನೆ ಒಂದೇ ರಾತ್ರಿಯಲ್ಲಿ ಮೂರು ಕಟ್ಟಡ ಕುಸಿದಿವೆ.
ಇನ್ನು ಮೈಸೂರು ಮಹಾನಗರಪಾಲಿಕೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನ ಗುರುತಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುವ ಪ್ರಯತ್ನವನ್ನೂ ಪಾಲಿಕೆ ಮಾಡಿಲ್ಲ.

ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ಕಟ್ಟಡಗಳು ಮತ್ತಷ್ಟು ಶಿಥಿಲಗೊಳ್ಳುತ್ತಿವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಕುಸಿದು ಬೀಳುವ ಆತಂಕ ಶುರುವಾಗಿದೆ. ಮಳೆಯಿಂದ ರಸ್ತೆಗಳು ಜಲಾವೃತ್ತವಾಗುತ್ತಿವೆ. ದಿನೇ ದಿನೇ ಮಳೆ ಹೆಚ್ಚಾಗುತ್ತಿದ್ದರು, ನಗರ ಪಾಲಿಕೆ ಮೈ ಮರೆತಂತಿದೆ.

ಇನ್ನು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರ ಗೋಳು ಕೇಳುವವರೇ ಇಲ್ಲ. ಮಳೆಯಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಮೈಸೂರಿನ ಜನ. ಮಳೆ ರಾದಾಂತ ನೋಡಿ ಸುಮ್ಮನಾಗಿರುವ ಪಾಲಿಕೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಬಿಟ್ಟು ಬಿಡದೆ ಸುರಿಯೋ ಮಳೆಗೆ ಯಾವ ಗಂಡಾಂತರ ಎದುರಾಗುತ್ತೋ ಎಂಬ ಆತಂಕದಲ್ಲಿದ್ದಾರೆ ಜನ.