ಕೋವಿಡ್ 3ನೇ ಅಲೆಯ ಭೀತಿಯ ನಡುವೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುನ್ಸೂಚನೆ!
ಬೆಂಗಳೂರು,ಜ.11-ಕರ್ನಾಟಕದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, 3ನೇ ಅಲೆ ಭೀತಿ ಶುರುವಾಗಿದೆ. ಸೋಂಕಿನ ಪ್ರಮಾಣವನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಕಠಿಣ ಕ್ರಮ ಕೈಗೊಂಡಿದ್ದು, ಅದಕ್ಕಾಗಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದೆ.

ಈ ನಡುವೆ ರಾಜ್ಯ ಮತ್ತೆ ಲಾಕ್ ಡೌನ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಸಚಿವ ಡಾ.ಅಶ್ವತ್ಥ್ ನಾರಾಯಣ್ ಅವರು ಸರ್ಕಾರ ಲಾಕ್ ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಲಾಕ್ ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಲಿದೆ . ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಅಲ್ಲದೆ, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ಪಾದಯಾತ್ರೆಯಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿ, ಅವರು ಅನುಭವವನ್ನು ರಾಜಕೀಯಕ್ಕೆ ಬಳಸಬೇಕು. ಅದರ ಬದಲು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಬಳಸುತ್ತಿದ್ದಾರೆ ವಾಗ್ದಾಳಿ ನಡೆಸಿದ್ದಾರೆ.