ಇನ್ ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ
ಬೆಂಗಳೂರು,ಅ.21-ಜಾನುವಾರುಗಳಿಗೆ ಆಸರೆಯಾಗಿ ಹೃದಯ ವೈಶಾಲ್ಯತೆ ಮೆರೆದಿದ್ದ ಇನ್ ಸ್ಪೆಕ್ಟರ್ ಮೊಹಮ್ಮದ್ ರಫಿಕ್ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಲಾಕ್ ಡೌನ್ ಸಂದರ್ಭದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಆಹಾರ ನೀಡುತ್ತಿದ್ದ ಮೊಹಮ್ಮದ್ ರಫಿಕ್ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರುವೊಂದನ್ನು ಸಾಕುತ್ತಿದ್ದರು. ಟ್ರಾನ್ಸಫರ್ ಆಗಿದ್ದರೂ ಕರುವನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಿದ್ದರು.

ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮೊಹಮ್ಮದ್ ರಫಿಕ್ ಅವರು ಇತ್ತೀಚೆಗೆ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಸುಬ್ರಹ್ಮಣಿ ಜೊತೆ ಭಾಗವಹಿಸಿದ್ದರು.
ಗುರುವಾರ ಬೆಳಿಗ್ಗೆ ಮನೆಯಲ್ಲಿ ಸ್ನಾನಕ್ಕೆ ತೆರಳಿದ್ದಾಗ ಉಸಿರಾಟದ ತೊಂದರೆ ಕಂಡುಬಂದಿದೆ. ಕೂಡಲೇ ಮನೆಯವರು ವೈದ್ಯರನ್ನು ಕರೆಸಿದ್ದರು. ಆದರೆ ಅಷ್ಟರಲ್ಲೇ ಮೊಹಮ್ಮದ್ ರಫೀಕ್ ಕೊನೆಯುಸಿರೆಳೆದಿದ್ದರು.