ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ-ಉದ್ಯೋಗ ನೋಂದಾವಣಿ ಕಾರ್ಯಕ್ರಮ ಉದ್ಘಾಟನೆ
ಮೈಸೂರು: ಮೈಸೂರಿನಲ್ಲಿ ದಿನಾಂಕ 04.01.2022 ರ ಮಂಗಳವಾರದಿಂದ 08.01.2021 ರ ಶನಿವಾರದ ವರೆಗೆ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ-ಉದ್ಯೋಗ ನೋಂದಾವಣಿ ಕಾರ್ಯಕ್ರಮ ಇಂದು ಬೆಳಗ್ಗೆ 10 ಗಂಟೆಗೆ ಗನ್ ಹೌಸ್ ಬಳಿ ಇರುವ ವಿದ್ಯಾಶಂಕರ ಕಲ್ಯಾಣ ಮಂದಿರದಲ್ಲಿ ಇಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ನೆರವೇರಿಸಿದರು.
ಮುಖ್ಯಮಂತ್ರಿಗಳು ಆನ್ಲೈನ್ ಮುಖಾಂತರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಜಿ ಜನ್ಮದಿನದ ಅಂಗವಾಗಿ ಕೃಷ್ಣರಾಜ ಕ್ಷೇತ್ರದಲ್ಲಿ ಮೋದಿ ಯುಗದ ವಿಶೇಷ ಉತ್ಸವವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಮೇಳವನ್ನು ಆಯೋಜಿಸಲಾಗಿತ್ತು ಅದರ ಮುಂದುವರಿದ ಭಾಗವಾಗಿ ಮೈಸೂರು ಜಿಲ್ಲಾ ಮಟ್ಟದಲ್ಲಿ ಶಾಸಕ ರಾಮದಾಸ್ ಅವರ ನೇತೃತ್ವದಲ್ಲಿ ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ-ಉದ್ಯೋಗ ನೋಂದಾವಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಕರಿಗೆ ಉದ್ಯಮ ಮತ್ತು ಕೌಶಲ್ಯವನ್ನು ನೀಡುವ ಈ ಕಾರ್ಯವು ಅತ್ಯಂತ ಪ್ರಶಂಸನೀಯವಾಗಿದೆ. ಸಾವಿರಾರು ಯುವಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲಿ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ನಂತರ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು strong india – ಸಮರ್ಥ ಕರ್ನಾಟಕ ಎಂಬ ಚಿಂತನೆಯನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ, ಪ್ರಧಾನಿ ನರೇಂದ್ರ ಮೋದಿಯವರು 2030 ಕ್ಕೆ ಭಾರತ ವಿಶ್ವಗುರುವಾಗುತ್ತದೆ ಎಂದು ಹೇಳಿದ್ದಾರೆ ಭಾರತದ ಭವಿಷ್ಯವನ್ನು ಬರೆಯುವ ಯುವಜನತೆಯನ್ನು ನೋಡಿ ಅವರು ಈ ರೀತಿ ಹೇಳಿದ್ದಾರೆ. ಅತ್ಯಂತ ಬುಅದ್ಧಿವಂತರು ಮಕ್ಕಳುಗಳು, ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಒಳ್ಳೆಯ ದಾರಿ ಹಾಕಿಕೊಟ್ಟರೆ ಭಾರತವನ್ನು ಎಲ್ಲಿಗೋ ಕೊಂಡೊಯ್ಯುವ ತಾಕತ್ತಿದೆ ಅಂತಹ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮದಿದೆ. ಈಗ ವಿದ್ಯಾರ್ಥಿಗಳ ಬಳಿಯಲ್ಲಿ ತಮ್ಮ ಅನಿಸಿಕೆಯನ್ನು ಹಾಗೂ ಅವರು ಏನಾಗಬೇಕು ಎಂಬುದನ್ನು ಬರೆಸಿಕೊಂಡಿದ್ದೇವೆ ಅದನ್ನು ಕ್ರೂಢೀಕರಿಸಿ ಮುಂದಿನ 10 ವರ್ಷಗಳ ನಿಮಗೆ ಯಾವ ರೀತಿಯ ಕೌಶಲ್ಯವನ್ನು ನೀಡಬೇಕೆಂಬುದನ್ನು ನಿರ್ಧರಿಸಿ ಆ ಕೌಶಲ್ಯವನ್ನು ನೀಡುವವರಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಂದ ಪ್ರಾರಂಭಿಸಿ ಅವರಿಗೆಲ್ಲ ನಾವು ಒಂದು ಚಿಂತನೆಯನ್ನು ನೀಡಿದ್ದೇವೆ, ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುಗಾಡಿ ವ್ಯಾಪಾರಿಗಳಿಗೆ ನಾವು ಇ – ವಾಹನವನ್ನು ಕೊಡುವವರಿದ್ದೇವೆ. ಶಿಕ್ಷಣ ಇಲಾಖೆ, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ತೋಟಗಾರಿಕಾ ಇಲಾಖೆ, ಪ್ರವಾಸೋದ್ಯಮ , ಪಶುಸಂಗೋಪನೆ ,ನಗರಾಭಿವೃದ್ಧಿ , ಆರೋಗ್ಯ ಮತ್ತು ಕೇಂದ್ರ ಸರ್ಕಾರದ 05 ಯೋಜನೆಗಳನ್ನು ಒಟ್ಟುಮಾಡಿ ಉದ್ಯೋಗ ಸೃಷ್ಟಿ ಮಾಡುವ ಈ ಕಾರ್ಯ ಒಂದು ಮಾದರಿಯಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ ರಾಮದಾಸ್ ಅವರು ಮೊದಲಿಂದಲೂ ಕೂಡಾ ಪ್ರಾಮಾಣಿಕವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ, ಇದೀಗ ನಿರುದ್ಯೋಗಿಗಳಿಗೆ ಹಾಗೂ ಸ್ವಯಂ ಉದ್ಯೋಗ ಮಾಡುವವರಿಗೆ ಒಂದು ಸುವರ್ಣಾವಕಾಶವನ್ನು ನೀಡಿದ್ದಾರೆ. ಬಹುಷಃ 224 ಕ್ಷೇತ್ರದಲ್ಲೇ ಈ ರೀತಿಯ ಕಾರ್ಯಗಳು ಬಹು ಅಪರೂಪವಾದದ್ದು. ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿಯಲ್ಲಿ ಎಲ್ಲಾ ಶಾಸಕರು, ಸಚಿವರು ಭಾಗವಹಿಸಿದ್ದರು ಅಲ್ಲಿ ಮಾನ್ಯ ರಾಮದಾಸ್ ಅವರ ಈ ಮಾದರಿ ಕೆಲಸಗಳಿಗಾಗಿ ಅವರಿಗೆ ಚಪ್ಪಾಳೆಯುನ್ನು ಹೊಡೆಯುವುದರ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸುವಂತೆ ಬಿಜೆಪಿ ರಾಷ್ಟೀಯ ಪ್ರಧಾನಕಾರ್ಯದರ್ಶಿಗಳಾದ ಅರುಣ್ ಸಿಂಗ್ ಅವರು ಹೇಳಿದ್ದರು, ಅಂದರೆ ರಾಮದಾಸ್ ಅವರ ಈ ಮಾದರಿ ಕಾರ್ಯಗಳು ರಾಷ್ಟ್ರದ ಮಟ್ಟದಲ್ಲಿ ತಲುಪಿದೆ ಎಂಬುದಕ್ಕೆ ಉದಾಹರಣೆ. ಇವತ್ತು ನಮ್ಮ ಸಹಕಾರ ಇಲಾಖೆ ಸ್ವ ಸಹಾಯ ಗುಂಪುಗಳಿಗೆ ಒಂದಿಷ್ಟು ಹಣವನ್ನು ತೆಗೆದಿಟ್ಟು ಅವರಿಗೆ ನೀಡಲೇಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದರು.
ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಗಿಸಿ ಹೊರಡುವ ವಿದ್ಯಾರ್ಥಿಗಳಿಗೆ ಅಲ್ಲೇ ವ್ಯಾಕ್ಸಿನೇಷನ್ ಅನ್ನು ನೀಡಿ ಕಳುಹಿಸುತ್ತಿರುವುದು ವಿಶೇಷವಾಗಿತ್ತು ಅಲ್ಲದೇ ಮಾನ್ಯ ಉಸ್ತುವಾರಿ ಸಚಿವರು ಹಾಗೂ ಶಾಸಕರು ಎಲ್ಲಾ ಸ್ಟಾಲ್ ಗಳಿಗೂ ಭೇಟಿ ನೀಡಿದರು, ನೆರೆದಿದ್ದ ವಿದ್ಯಾರ್ಥಿಗಳೊಡನೆ ಮಾತನಾಡಿದ್ದು ವಿದ್ಯಾರ್ಥಿಗಳಲ್ಲಿ ಹುರುಪು ತಂದಿತ್ತು.
ಸದರಿ ಕಾರ್ಯಕ್ರಮದಲ್ಲಿ ಮೇಯರ್ ಆದ ಶ್ರೀಮತಿ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್, ನಗರಪಾಲಿಕಾ ಕಮಿಷನರ್ ಆದ ಲಕ್ಷ್ಮೀಕಾಂತ್ ರೆಡ್ಡಿ, ಮೂಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ನಗರಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಶಿವಕುಮಾರ್, ಪಾಲಿಕೆ ಸಾದ್ಯರಾದ ಬಿ.ವಿ.ಮಂಜುನಾಥ್, ಬಿಜೆಪಿ ಮೈಸೂರು ನಗರ ಪ್ರಧಾನಕಾರ್ಯದರ್ಶಿ ವಾಣೀಶ್ ಕುಮಾರ್ , ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷರಾದ ಸಂತೋಷ್ ಶಂಭು, ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ (ಅಪ್ಪಿ), ಸ್ಥಳೀಯ ನಗರಪಾಲಿಕಾ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.