ಮೈಸೂರಿನ T-ನರಸೀಪುರದಲ್ಲಿ ಅನಿಲ ಸೋರಿಕೆ!
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಅನಿಲ ಸೋರಿಕೆಯಾಗಿದ್ದು, ಅನಿಲ ಸೋರಿಕೆಯಿಂದ 5ಕ್ಕು ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಸಾರ್ವಜನಿಕರು ಸೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ಅಸ್ವಸ್ಥಗೊಂಡಿದ್ದು, ಸಾರ್ವಜನಿಕರ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಉಂಟಾದ ಅನಿಲ ಸೋರಿಕೆಯಿಂದ ಈ ಘಟನೆ ಸಂಭವಿಸಿದೆ. ನೀರಿನ ಶುದ್ದಿಕರಣಕ್ಕಾಗಿ ಅಳವಡಿಸಲಾಗಿದ್ದ ಕ್ಲೋರಿನ್ ಸಲ್ಯೂಷನ್ ಸಿಲಿಂಡರ್ನ್ನ ನಿನ್ನೆ ಸಂಜೆ ನೀರು ಶುದ್ದೀಕರಣ ಮಾಡುವ ವೇಳೆ ಅನಿಲ ಸೋರಿಕೆಯಾಗಿದೆ.

ಅನಿಲ ಸೋರಿಕೆಯಿಂದ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಮುತ್ತಲಿನ ಪ್ರದೇಶಕ್ಕೆ ಅನಿಲ ಹರಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಈಗಾಗಲೇ ಸ್ಥಳೀಯರನ್ನು ಮನೆಯಿಂದ ಹೊರ ಬಾರದಂತೆ ಪೊಲೀಸರು ಸೂಚಿಸಿದ್ದು, ಅನಿಲ ಸೋರಿಕೆಯನ್ನು ತಡೆಯಲು ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸಪಡುತ್ತಿದ್ದಾರೆ.

ಈಗಾಗಲೇ ಮೈಸೂರಿನಾದ್ಯಂತ ಹೆಚ್ಚುವರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಸುಮಾರು 20ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

ಸದ್ಯ ಅಸ್ವಸ್ಥಗೊಂಡವರಿಗೆ ಟಿ.ನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಾಣುತ್ತಿದೆ. ಅಸ್ವಸ್ಥಗೊಂಡವರ ಪರಿಸ್ಥಿತಿ ವಿಚಾರಿಸಲು ತಾಲೂಕು ಆಸ್ಪತ್ರೆಗೆ ತಡರಾತ್ರಿ ಶಾಸಕ ಅಶ್ವಿನ್ ಕುಮಾರ್ ಹಾಗೂ ಡಿಹೆಚ್ಓ ಪ್ರಸಾದ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.