ನಂಜುಂಡನ ಹುಂಡಿ ಎಣಿಕೆ: ಕಳೆದ ಬಾರಿಗಿಂತ 45 ಲಕ್ಷ ಹೆಚ್ಚುವರಿ ಹಣ ಸಂಗ್ರಹ
ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. 20 ಕ್ಕೂ ಹೆಚ್ಚು ಹುಂಡಿಗಳಿಂದ 2,49,07,052/- (ಎರಡು ಕೋಟಿ ನಲವತ್ತೊಂಭತ್ತು ಲಕ್ಷದ ಏಳು ಸಾವಿರದ ಐವತ್ತೆರಡು) ರೂ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 45 ಲಕ್ಷ ಹೆಚ್ಚುವರಿಯಾಗಿ ಹಣ ಸಂಗ್ರಹವಾಗಿದೆ.

ನಂಜನಗೂಡು ದೊಡ್ಡ ಜಾತ್ರೆ ಅಂಗವಾಗಿ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ. ಈ ಬಾರಿಯೂ ನಿಷೇಧಿತ ನೋಟುಗಳನ್ನ ಭಕ್ತರು ಕಾಣಿಕೆಯಾಗಿ ಒಪ್ಪಿಸಿದ್ದಾರೆ. 41 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಕಾಣಿಕೆಯಾಗಿ ಬಂದಿದೆ. ನಗದು ಜೊತೆಗೆ 220 ಗ್ರಾಂ ಚಿನ್ನ ಹಾಗೂ 6 ಕೆಜಿ 500 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ.
ಕಳೆದ ಬಾರಿ 28,500 ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿತ್ತು. ಈ ಬಾರಿ 41 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.ಜೊತೆಗೆ 111 ವಿದೇಶಿ ಕರೆನ್ಸಿಗಳು ಸಹ ಭಕ್ತರು ಕಾಣಿಕೆಯಾಗಿ ಅರ್ಪಿಸಿದ್ದಾರೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಸೇರಿದಂತೆ ದೇವಾಲಯದ ಇತರ ಅಧಿಕಾರಿಗಳು ಮತ್ತು ಸುಮಾರು 40 ಕ್ಕೂ ಹೆಚ್ಚು ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದರು