ನಂಜನಗೂಡು: ಹುಲಿ ಬಾಯಿಗೆ ಬಲಿಯಾದ ಎರಡು ಹಸುಗಳು; ಸ್ಥಳಕ್ಕೆ ಧಾವಿಸದ ಅರಣ್ಯ ಇಲಾಖೆ ಅಧಿಕಾರಿಗಳು
ನಂಜನಗೂಡು,ಫೆ.2-ಹುಲಿಯ ಬಾಯಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಮಹದೇವನಗರ ಗ್ರಾಮದಲ್ಲಿ ನಡೆದಿದೆ.
ಹಸುಗಳನ್ನು ರಕ್ಷಿಸಲು ಮುಂದಾದ ರೈತನ ಮೇಲೂ ಹುಲಿ ಎಗರಲು ಮುಂದಾಗಿದೆ ಈ ವೇಳೆ ಅವರು ತಪ್ಪಿಸಿಕೊಂಡಿದ್ದರು.
ಘಟನೆ ನಡೆದು 2ದಿನಗಳು ಕಳೆದರೂ ಸ್ಥಳ ಪರಿಶೀಲನೆ ಮಾಡಿ ಪರಿಹಾರ ಒದಗಿಸಿಕೊಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಗ್ರಾಮಾಸ್ಥರು ಗೋಗರೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಮಹದೇವ ನಗರ ಗ್ರಾಮದ ಪಾಪಣ್ಣ ಮತ್ತು ಸಾಕಮ್ಮ ಎಂಬ ದಂಪತಿಗೆ ಸೇರಿದ ಎರಡು ಹಾಲು ಕರೆಯುವ ಹಸುಗಳ ಬಲಿಯಾಗಿವೆ.
ಪಾಪಣ್ಣ ತಮ್ಮ ಕೃಷಿ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಹಸುಗಳ ಮೇಲೆರಗಿತ್ತು. ದಿನನಿತ್ಯ ಹದಿನೈದಕ್ಕೂ ಹೆಚ್ಚು ಲೀಟರ್ ಹಾಲು ಕರೆಯುತ್ತಿದ್ದ ಸುಮಾರು ಒಂದೂವರೆ ಲಕ್ಷ ರೂ.ಬೆಲೆಬಾಳುವ ಎರಡು ಹಸುಗಳನ್ನು ಕಳೆದುಕೊಂಡ ಕುಟುಂಬ ರೋಧಿಸುತ್ತಿದೆ.
ಹಸುಗಳಿಲ್ಲದ ಮೇಲೆ ಇನ್ನೂ ನಮ್ಮ ಜೀವನ ದೂಡುವುದೇ ಕಷ್ಟಕರವಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ನಾವು ಆತ್ಮಹತ್ಯೆಗೆ ಮುಂದಾಗುತ್ತೇವೆ ಎಂದು ನೊಂದ ಕುಟುಂಬ ಅಳಲನ್ನು ವ್ಯಕ್ತಪಡಿಸಿದೆ.