ಬೆಲೆ ಏರಿಕೆ ಖಂಡಿಸಿ ವಿಧಾನಸೌಧಕ್ಕೆ ಟಾಂಗಾ ಜಾಥಾ ಕಾಂಗ್ರೆಸ್ ನಾಯಕರು
ಬೆಂಗಳೂರು,ಸೆ.24-ಇಂಧನ ದರ ಏರಿಕೆ ಖಂಡಿಸಿ ಎತ್ತಿನ ಗಾಡಿ ಜಾಥಾ, ಸೈಕಲ್ ಜಾಥಾ ನಡೆಸಿದ್ದ ಕಾಂಗ್ರೆಸ್ ಇದೀಗ ಟಾಂಗಾ ಜಾಥಾ ನಡೆಸಿದ್ದಾರೆ. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಟಾಂಗಾ ಗಾಡಿ ಮೂಲಕ ವಿಧಾನಸೌಧ ತಲುಪಿದ ಕಾಂಗ್ರೆಸ್ ನಾಯಕರು ಕೇಂದ್ರ- ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಯಿತು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೇ ಟಾಂಗಾದಲ್ಲಿ ಇದ್ದರು.
ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜನರ ರಕ್ತ ಹೀರುತ್ತಿದೆ. ಸಾಮಾನ್ಯ ಮತ್ತು ಬಡ ವರ್ಗಗಳ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ಹಲವು ಕಡೆಗಳಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರ ಟಾಂಗಾಗಳಿಗೆ ಪೊಲೀಸರ ತಡೆ: ಈ ವೇಳೆ ಜನದಟ್ಟಣೆ, ಸಂಚಾರ ದಟ್ಟಣೆಯಾಗುತ್ತಿರುವುದನ್ನು ಮನಗಂಡ ಪೊಲೀಸರು ಕಾಂಗ್ರೆಸ್ ನಾಯಕರು, ಶಾಸಕರಿಗೆ ಮಾತ್ರ ಹೋಗಲು ಅವಕಾಶ ನೀಡಿದ್ದು, ಕಾರ್ಯಕರ್ತರ ಟಾಂಗಾಗಳಿಗೆ ತಡೆಯೊಡ್ಡಿದ್ದಾರೆ. ಎಂಟು ಟಾಂಗಾಗಳಿಗೆ ಮಾತ್ರ ಅರ್ಧದಿಂದ ಮುಂದೆ ವಿಧಾನಸೌಧದತ್ತ ಹೋಗಲು ಅವಕಾಶ ನೀಡಲಾಗಿದೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರ ವಿರುದ್ಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಮ್ಮ ಮೂರನೇ ಹೋರಾಟ ಇದು. ಇವತ್ತು ಟಾಂಗಾ ಗಾಡಿ ಮೇಲೆ ಬಂದು ಪ್ರತಿಭಟನೆ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರು, ರೈತರು, ಕಾರ್ಮಿಕರು, ಬಡವರಿಗೆ ಬದುಕು ದುಸ್ತರವಾಗಿದೆ. ಜನರ ಮನೆಗಳಿಗೆ ಬೆಂಕಿ ಬಿದ್ದಿದೆ.
ಹಿಂದೆ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 40 ರೂಪಾಯಿಯಷ್ಟು ಇರುವಂತೆ ನೋಡಿಕೊಂಡಿದ್ದರು. ಪೆಟ್ರೋಲ್, ಡೀಸೆಲ್ ಬೆಲೆ ಸೀಮಿತ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅಚ್ಛೇ ದಿನ್ ಆಯೇಗಾ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಮತ್ತು ಬಿಜೆಪಿಯವರು ಇಂದು ಬಡವರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದು ಇಂಧನ ಸೇರಿದಂತೆ ಅಗತ್ಯ ವಸ್ತುಗಳು, ಮನೆ ನಿರ್ಮಾಣ ಮಾಡುವ ವಸ್ತುಗಳ ಬೆಲೆ ಗಗನಕ್ಕೇರಿದೆ, ಕೊರೊನಾ ಬಂದ ಮೇಲೆ ಜನರ ಆದಾಯ ಕಡಿಮೆಯಾಗಿದೆ ಹೊರತು ಖರ್ಚು ಕಡಿಮೆ ಆಗಿಲ್ಲ. ನಾವು ಎಷ್ಟೇ ಹೇಳಿದರೂ ಎಮ್ಮೆ ಚರ್ಮದ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಯಾವುದೂ ಇಲ್ಲ. ನಮ್ಮ ಹೋರಾಟ ನಿರಂತರ. ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯತಿನಲ್ಲಿ ಕೂಡ ಹೋರಾಟ ಮಾಡಲಿದ್ದೇವೆ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಬಡವರ್ಗದವರಿಗೆ ತಲುಪುತ್ತಿಲ್ಲ. ಜನರ ರಕ್ತವನ್ನು ಸರ್ಕಾರ ಹೀರುತ್ತಿದೆ. ಜನರ ಧ್ವನಿಯಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.