ಭಾರತದಲ್ಲಿ 9 ಲಕ್ಷಕ್ಕೂ ಹೆಚ್ಚು ಮಂದಿಗೆ ಬೂಸ್ಟರ್ ಡೋಸ್ ಲಸಿಕೆ
ನವದೆಹಲಿ,ಜ.11-ದೇಶದೆಲ್ಲೆಡೆ ಕೋವಿಡ್-19ನ 3ನೇ ಅಲೆಯ ಆತಂಕ ಶುರುವಾಗಿದೆ. ಅದಕ್ಕೆ ಕಾರಣ ಕೋವಿಡ್ ವೈರಸ್ ಮತ್ತೆ ಸ್ಫೋಟಗೊಂಡಿರುವುದು. ಸೋಂಕಿನ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮವನ್ನು ಕೈಗೊಂಡಿದೆ.
ಆ ನಿಟ್ಟಿನಲ್ಲಿ ದೇಶಾದ್ಯಂತ ನಿನ್ನೆಯಿಂದ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ 60 ವರ್ವ ಮೇಲ್ಪಟ್ಟವರಿಗೆ, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಅದರಂತೆ ಲಸಿಕಾ ಅಭಿಯಾನದಲ್ಲಿ ಅದಾಗಲೇ ದಾಖಲೆಯ ಸಂಖ್ಯೆಯ 9 ಲಕ್ಷಕ್ಕೂ ಅಧಿಕ ಮಂದಿಗೆ ಒಂದೇ ದಿನ ಲಸಿಕೆ ನೀಡಲಾಗಿದೆ. ಇದನ್ನು ಕೇಂದ್ರ ಆರೋಗ್ಯ ಇಲಾಖೆ ದೃಢಪಡಿಸಿದೆ.
4,91,013 ಮಂದಿ ಆರೋಗ್ಯ ಕಾರ್ಯಕರ್ತರು, 1,90,383 ಮಂದಿ ಮುಂಚೂಣಿ ಕಾರ್ಯಕರ್ತರು ಹಾಗೂ 2,54,868 ಮಂದಿ ಹಿರಿಯರಿಗೆ ಮುನ್ನೆಚ್ಚರಿಕೆಯ ಡೋಸ್ ನೀಡಲಾಗಿದೆ.
ದೇಶದಲ್ಲಿ ಒಟ್ಟಾರೆ 152.78 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 81,728 ಬೂಸ್ಟರ್ ಡೋಸ್ಗಳನ್ನು ನೀಡಲಾಗಿದ್ದು, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆ ಮೂಲಕ ಕರ್ನಾಟಕ ಮೈಲುಗಲ್ಲು ಸಾಧಿಸಿದೆ.